ಡೈಲಿ ವಾರ್ತೆ: 10/OCT/2023
ಭದ್ರಾವತಿ: ಯುವಕನಿಗೆ ಪುಂಡರಿಂದ ಚೂರಿ ಇರಿತ: ಹಿಂದೂ ಕಾರ್ಯಕರ್ತರ ಜಮಾವಣೆ
ಶಿವಮೊಗ್ಗ: ರಾಗಿಗುಡ್ಡದ ಈದ್ ಮಿಲಾದ್ ಮೆರವಣಿಗೆಯಲ್ಲಿ ಉಂಟಾದ ಗಲಭೆಯ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಶಿವಮೊಗ್ಗದ ಸಮೀಪದ ನಗರ ಭದ್ರಾವತಿಯಲ್ಲಿ ಇನ್ನೊಂದು ಹಲ್ಲೆ ಪ್ರಕರಣ ನಡೆದಿದ್ದು, ಕೋಮು ಉದ್ವಿಗ್ನತೆಗೆ ಕಾರಣವಾಗುವ ಸೂಚನೆಗಳು ಕಾಣಿಸಿವೆ.
ಸ್ಥಳೀಯರಾದ ನಂದಕುಮಾರ (32) ಎಂಬ ಹಿಂದೂ ಯುವಕನಿಗೆ ಪುಂಡರು ಚೂರಿಯಿಂದ ಇರಿದಿದ್ದಾರೆ.
ಈ ಘಟನೆಯು ಭದ್ರಾವತಿಯ ಹನುಮಂತನಗರದ ಬಡಾವಣೆಯಲ್ಲಿ ನಡೆದಿದ್ದು. ಚೂರಿಯಿಂದ ಬೆನ್ನಿನ ಮೇಲೆ ಯುವಕರ ಗುಂಪು ಇರಿದಿದ್ದು, ಗಾಯಗೊಂಡ ಯುವಕ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕರೆ ಮಾಡಲು ನಿನ್ನ ಮೊಬೈಲ್ ಕೊಡು ಎಂದು ಯುವಕರ ಗುಂಪು ಕೇಳಿತ್ತು. ನಂದಕುಮಾರ ಮೊಬೈಲ್ ಕೊಡಲು ನಿರಾಕರಿಸಿದಾಗ ಆತನ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಇದರ ಬಗ್ಗೆ ದೂರು ನೀಡಲು ನಂದಕುಮಾರ ಪೊಲೀಸ್ ಠಾಣೆಗೆ ತೆರಳಿದ್ದು, ಠಾಣೆಯಿಂದ ವಾಪಸ್ ಬರುತ್ತಿದ್ದಾಗ ಚೂರಿಯಿಂದ ಹಲ್ಲೆ ನಡೆಸಿದ್ದಾರೆ.
ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿರುವ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ರಾತ್ರೋರಾತ್ರಿ ಆಸ್ಪತ್ರೆ ಮುಂದೆ ಜಮಾಯಿಸಿದರು. ಪುಂಡರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಉಂಟಾದ ಸನ್ನಿವೇಶದ ಪರಿಣಾಮವಾಗಿ ಶೀಘ್ರವೇ ಎಚ್ಚೆತ್ತುಕೊಂಡಿರುವ ಪೊಲೀಸರು, ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಎಎಸ್ಪಿ ಅನಿಲಕುಮಾರ ಭೂಮರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಯುವಕನಿಂದ ಮಾಹಿತಿ ಪಡೆದಿದ್ದಾರೆ. ಸ್ಥಳದ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಪುಂಡರ ತಲಾಶೆಗೆ ಬಲೆ ಬೀಸಲಾಗಿದೆ.