ಡೈಲಿ ವಾರ್ತೆ: 16/OCT/2023

ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂ ಹಣ ಪತ್ತೆ ಪ್ರಕರಣ:ಶೀಘ್ರವಾಗಿ ತನಿಖೆಗೆ ಒಪ್ಪಿಸಲು ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಪ್ರತಿಭಟನೆ

ಬಂಟ್ವಾಳ : ಬೆಂಗಳೂರಿನ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂ ಹಣ ಪತ್ತೆಯಾದ ಪ್ರಕರಣವನ್ನು ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಬಿ.ಸಿ.ರೋಡಿನಲ್ಲಿ ಸೋಮವಾರ ಬೆಳಗ್ಗೆ ಪ್ರತಿಭಟನೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಅವರು ಕಳೆದ ಬಾರಿ ಚುನಾವಣಾ ಪ್ರಚಾರದ ಸಂದರ್ಭ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ ಮಾತನ್ನು ನೆನಪಿಸಿ, ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೆ, ಕರ್ನಾಟಕವನ್ನು ಎಟಿಎಂ ಮಾಡುತ್ತದೆ ಎಂಬುದು ಈಗ ಸಾಬೀತಾಗುತ್ತಿದೆ ಎಂದ ಅವರು ತಕ್ಷಣವೇ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡುತ್ತೇನೆ ಎಂದಿದ್ದ ಉಚಿತ ಸ್ಕೀಮುಗಳಿಂದ ರಾಜ್ಯ ದಿವಾಳಿಯಾಗುವ ಅಂಚಿನಲ್ಲಿದ್ದು, ಇದೀಗ ಗುತ್ತಿಗೆದಾರನ ಮನೆಯಲ್ಲಿ ಹಣ ಸಿಕ್ಕಿರುವುದು ಭ್ರಷ್ಟಾಚಾರ ಇದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ರಾಜ್ಯ ನಾಯಕಿ ಸುಲೋಚನಾ ಜಿ.ಕೆ.ಭಟ್, ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ಸಹಿತ ವಿವಿಧ ಮೋರ್ಚಾಗಳ ಪ್ರಮುಖರು, ಪುರಸಭೆ ಸದಸ್ಯರು, ಪಕ್ಷ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.