ಮೃತ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ

ಡೈಲಿ ವಾರ್ತೆ: 20/OCT/2023

ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಡಿ. ಪರಮೇಶ್ವರ್

ತುಮಕೂರು: ಕಲಬುರಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತನಿಖಾ ವರದಿ ಬಂದ ನಂತರ ಸತ್ಯಾಂಶ ಹೊರ ಬರಲಿದೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರೆಲ್ಲ ಕೈವಾಡ ಇದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.

ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪಾತ್ರ ಇದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಿ, ಖಚಿತ ಪಡಿಸಿಕೊಳ್ಳಬೇಕಿದೆ. ಆರೋಪ ಮಾಡುತ್ತಿರುವವರ ಹೇಳಿಕೆಯನ್ನು ಪಡೆದುಕೊಂಡು ಪರಿಶೀಲಿಸಬೇಕಿದೆ. ಅದಕ್ಕಾಗಿ ಸಿಐಡಿ ತನಿಖೆ ನಡೆಸಲಾಗುತ್ತಿದೆ.

ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ. ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ವಿಚಾರದಲ್ಲಿ ಎಲ್ಲಾ ಆರೋಪಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಡಿಯೋ ರೆಕಾರ್ಡ್ ಮಾಡಿದ್ದ ಶಿವಕುಮಾರ್, ನನ್ನ ಸಾವಿಗೆ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಎಂದು ಗಂಭೀರ ಆರೋಪ ಮಾಡಿದ್ದ.

ಆದ್ರೆ, ಇದೀಗ ಶಿವಕುಮಾರ್ ಪತ್ನಿ ಮಲ್ಲಮ್ಮ ಅವರು ರೈತ ಆತ್ಮಹತ್ಯೆ ಎಂದು ದೂರು ದಾಖಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ರಾಜ್ಯ ಸರ್ಕಾರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಶಿವಕುಮಾರ್ ತಾಯಿ ಸುಶೀಲಾಬಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆತ್ಮಹತ್ಯೆ ಯಾಕೆ ಮಾಡಿಕೊಂಡಿದ್ದಾನೆ ಎಂದು ನನಗೆ ಗೊತ್ತಿಲ್ಲ. ನಸುಕಿನ ಜಾವ 4:30 ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗ ಸಾಲ ಮಾಡಿಕೊಂಡಿದ್ದ. ಆದ್ರೆ, ಎಷ್ಟು ಸಾಲ ಎಂದು ನಮಗೂ ಹೇಳಿಲ್ಲ. ಎರಡ್ಮೂರು ದಿನದಿಂದ ನನ್ನ ಮಗ ಊಟ ಮಾಡಿರಲಿಲ್ಲ.

ಯಾವುದೇ ರೀತಿಯ ಗಲಾಟೆ ಆಗಿರಲಿಲ್ಲ . ಬಿಜೆಪಿ ಪಕ್ಷದಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಿದ್ದ. ಬಿಜೆಪಿ ಕಾಂಗ್ರೆಸ್ ಗಲಾಟೆ ಬಗ್ಗೆ ನನಗೆ ಗೊತ್ತಿಲ್ಲ. ಸಚಿವ ಶರಣಪ್ರಕಾಶ್ ಹೆಸರು ಹೇಳಿರುವ ಆಡಿಯೋ ಬಗ್ಗೆ ಗೊತ್ತಿಲ್ಲ. ನಾವು ಅತ್ತೆ ಸೊಸೆ ಮನೆಯಲ್ಲಿ ಇರುತ್ತೇವೆ. ಹಾಗಾಗಿ ಯಾವುದೇ ಗಲಾಟೆ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.