ಡೈಲಿ ವಾರ್ತೆ: 23/OCT/2023

ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಪ್ರಕರಣ: ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ!

ಬೆಂಗಳೂರು: ಹೆಚ್.ಡಿ ರೇವಣ್ಣ ಆಪ್ತ ಅಶ್ವಥ್ ನಾರಾಯಣ್ ಗೌಡನ ಅಪಹರಣ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಸ್‍ಡಿ ಇನ್ಸ್‌ಪೆಕ್ಟರ್ ಅಶೋಕ್ ಭೂಗತ ಪಾತಕಿ ಬಾಂಬೆ ರವಿ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

ಬಾಂಬೆ ರವಿ ಹಾಗೂ ಆತನ ಸಹಚರರನ್ನು ಬಳಸಿಕೊಂಡು ಹಫ್ತಾ ವಸೂಲಿ, ಬಡ್ಡಿ ವ್ಯವಹಾರ ಹಾಗೂ ಬೆದರಿಕೆ ಹಾಕಿರುವ ಆರೋಪ ಕೂಡ ಇನ್ಸ್‌ಪೆಕ್ಟರ್ ಅಶೋಕ್ ವಿರುದ್ಧ ಕೇಳಿ ಬಂದಿದೆ. ರೇವಣ್ಣ ಆಪ್ತನ ಅಪಹರಣ ಯತ್ನ ಪ್ರಕರಣದಲ್ಲಿ ಲೊಕೇಷನ್ ಸೇರಿದಂತೆ ಪ್ರತಿ ವಿಚಾರದಲ್ಲೂ ಆರೋಪಿಗಳಿಗೆ ಇನ್ಸ್‌ಪೆಕ್ಟರ್ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೇ ನಿರ್ಮಾಪಕ ಉಮಾಪತಿ ಗೌಡ ಹಾಗೂ ಉದ್ಯಮಿ ದೀಪಕ್ ಗೌಡ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲೂ ಇನ್ಸ್‌ಪೆಕ್ಟರ್ ಪಾತ್ರ ಇರುವ ಶಂಕೆ ಇದೆ.

ಉಮಾಪತಿ ಗೌಡ ಕೇಸಲ್ಲಿ ಅರೆಸ್ಟ್ ಆಗಿದ್ದ ರೌಡಿ ಶೀಟರ್ ಸಂತು ಹಾಗೂ ಕರಿಯಾ ರಾಜೇಶ್ ಆರೋಪಿ ಅಶೋಕ್‍ಗೆ ಹುಟ್ಟುಹಬ್ಬದ ಶುಭಾಶಯದ ಸ್ಟೇಟಸ್ ಹಾಕಿಕೊಂಡಿದ್ದರು. ಅಲ್ಲದೇ ಇನ್ಸ್‌ಪೆಕ್ಟರ್‌ಗೆ ಪ್ರಮೋಷನ್ ಆದಾಗ ಸಹ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಈ ಪ್ರಕರಣಗಳಲ್ಲಿ ಆತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ ಸಿಸಿಬಿಯಲ್ಲಿ (CCB) ಇನ್ಸ್‌ಪೆಕ್ಟರ್ ಆಗಿದ್ದ ಅಶೋಕ್, ರೌಡಿಗಳ ಜೊತೆ ಲಿಂಕ್ ಬೆಳೆಸಿಕೊಂಡು ಸಮಾಜಘಾತುಕ ಶಕ್ತಿಗಳ ಜೊತೆ ಸೇರಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.