ಡೈಲಿ ವಾರ್ತೆ: 24/OCT/2023
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಹೃದಯಾಘಾತ: ವೈದ್ಯರ ತಂಡದಿಂದ ತೀವ್ರ ನಿಗಾ
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ರಷ್ಯಾದ ಕ್ರೆಮ್ಲಿನ್ ನ ಟೆಲಿಗ್ರಾಮ್ ಚಾನೆಲ್ ಮಾಹಿತಿ ನೀಡಿದೆ.
ಹೃದಯ ಸ್ತಂಭನಕ್ಕೆ ಒಳಗಾದ ಬಳಿಕ ತಮ್ಮ ಬೆಡ್ ರೂಮಿನ ನೆಲದ ಮೇಲೆ ಬಿದ್ದಿದ್ದರು ಎಂದು ಅವರ ನಿವಾಸದ ಸಿಬ್ಬಂದಿ ಹೇಳಿದ್ದಾರೆ. ವೈದ್ಯರ ತಂಡ ಅವರ ಚಿಕಿತ್ಸೆಯಲ್ಲಿ ತೊಡಗಿದೆ.
ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಪುಟಿನ್ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅಷ್ಟರಲ್ಲಿ ಈ ಸುದ್ದಿ ಬಂದಿದೆ. ಕಾವಲುಗಾರ ಪುಟಿನ್ ಅವರು ನೆಲದ ಮೇಲೆ ಮಲಗಿರುವುದನ್ನು ಕಂಡಿದ್ದಾರೆ. ಹೀಗೆ ಪುಟಿನ್ ನೆಲದ ಮೇಲೆ ಇರುವುದನ್ನು ನೋಡಿದ ತಕ್ಷಣ ಕಾವಲುಗಾರ ತಕ್ಷಣವೇ ವೈದ್ಯರನ್ನು ಕರೆಸಿದ್ದಾರೆ.
ಮಾಸ್ಕೋ ಸಮಯ 21:05 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಅವರ ಕೊಠಡಿಯಿಂದ ದೊಡ್ಡ ಶಬ್ದ ಬಂದಿದೆ. ಸದ್ದು ಕೇಳಿದ ಸೆಕ್ಯುರಿಟಿ ಗಾರ್ಡ್ಗಳು ಪುಟಿನ್ ಇರುವ ಕೋಣೆಯನ್ನು ತಲುಪಿದಾಗ ಅವರು ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ಅದೇ ಸಮಯದಲ್ಲಿ ಊಟದ ತಟ್ಟೆಯೂ ಅವರ ಪಕ್ಕದಲ್ಲಿತ್ತು ಎನ್ನಲಾಗಿದೆ. ಈ ವಿಚಾರ ಸಿಕ್ಕ ತಕ್ಷಣವೇ ವೈದ್ಯರು ಅವರ ಕೊಠಡಿಗೆ ಆಗಮಿಸಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಇತ್ತೀಚಿನ ಮಾಹಿತಿ ಪ್ರಕಾರ ಪುಟಿನ್ ಅವರಿಗೆ ಪ್ರಜ್ಞೆ ಬಂದಿದ್ದು, ಅವರ ಆರೋಗ್ಯ ಚೆನ್ನಾಗಿದೆ. ಟೆಲಿಗ್ರಾಮ್ ಗ್ರೂಪ್ ಜನರಲ್ ಎಸ್ವಿಆರ್ ಈ ಸುದ್ದಿಯನ್ನು ಮೊದಲಿಗೆ ಹಂಚಿಕೊಂಡಿದೆ ಎಂದು ವರದಿಯಾಗಿದೆ.