ಡೈಲಿ ವಾರ್ತೆ: 27/OCT/2023

ಹುಲಿ ಉಗುರು ಲಾಕೆಟ್‌ ಪ್ರಕರಣ: ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು

ಬೆಂಗಳೂರು: ಹುಲಿ ಉಗುರು ಲಾಕೆಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರಾಗಿದೆ.

2ನೇ ಎಸಿಜೆಎಂ ನ್ಯಾಯಾಲಯ 4 ಸಾವಿರ ನಗದು ಶ್ಯೂರಿಟಿ ಅಥವಾ ಒಬ್ಬ ವ್ಯಕ್ತಿಯ ಶ್ಯೂರಿಟಿ, ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಮೀನು ಮಂಜೂರು ಮಾಡಿದೆ.

ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಂತೋಷ್‌ ಇಂದು ಸಂಜೆ 7 ಗಂಟೆ ಬಳಿಕ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹಳ್ಳಿಕಾರ್‌ ರಾಸುಗಳ ರಕ್ಷಣೆಯ ಮೂಲಕ ಗುರುತಿಸಿಕೊಂಡಿದ್ದ ಸಂತೋಷ್‌ ಅವರು 10ನೇ ಅವೃತ್ತಿಯ ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು.

ಕುತ್ತಿಗೆಯಲ್ಲಿ ಸಂತೋಷ್‌ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್‌ ಅವರನ್ನು ಬಂಧಿಸಿದ್ದರು.

ವರ್ತೂರು ಸಂತೋಷ್ ಅವರು ಹಲವು ಪ್ರಾಣಿಗಳನ್ನು ಸಾಕಿದ್ದು, ಹಳ್ಳಿಕಾರ್ ರಾಸು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.