ಡೈಲಿ ವಾರ್ತೆ: 01/NOV/2023

ಕೋಟ ವರುಣತೀರ್ಥ ವೇದಿಕೆ ವತಿಯಿಂದ 50 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕೋಟ: 50ನೇ ವರ್ಷದ ಕನ್ನಡ ರಾಜ್ಯೋತ್ಸವ ಸಡಗರವನ್ನು ಕೋಟ ವರುಣತೀರ್ಥ ವೇದಿಕೆ ವತಿಯಿಂದ ಕೋಟ ವರ್ಣತೀರ್ಥ ಕೆರೆಯ ಕೊಠಾರದಲ್ಲಿ ಇಂದು ಬೆಳಿಗ್ಗೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಕೋಟ ಆರಕ್ಷಕ ಠಾಣಾಧಿಕಾರಿ ಶಂಭುಲಿಂಗಯ್ಯ ರವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು 1973ರ ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದರು.

ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನೆರವೇರಿಸಿದರು.
ಅವರು ಮಾತನಾಡಿ ಇಂದು ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದ ವಾತಾವರಣವಾಗಿದೆ.
ಕನ್ನಡ ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಯಿಂದ ಪ್ರೀತಿಯಿಂದ ಗೌರವದಿಂದ, ಅಭಿಮಾನದಿಂದ ಸಡಗರದಿಂದ ಸಂತೋಷದಿಂದ ಆಚರಣೆ ಮಾಡುತ್ತಾನೆ.
ಅಲ್ಲದೆ ಇಂದು ನಮಗೆ ಖುಷಿ ಎಂದರೆ ನಮ್ಮ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕೋಟದ ಇಬ್ಬರಾದ ಯಕ್ಷಗಾನಕ್ಕೆ ಕೃಷ್ಣಮೂರ್ತಿ ಉರಾಳ ಮತ್ತು ಕೃಷಿಗೆ ಜಯರಾಮ್ ಶೆಟ್ಟಿ ಪಡೆದಿರುವುದು ಸಂತೋಷವಾಗಿದೆ.
ಪ್ರಶಸ್ತಿ ವಿಚಾರ ಬಂದಾಗ ಕರ್ನಾಟಕಕ್ಕೆ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದವರಿದ್ದಾರೆ. ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಶಿವರಾಮ ಕಾರಂತರು ಕೋಟದವರು ಎನ್ನುವ ಹೆಗ್ಗಳಿಕೆ ನಮ್ಮದು. ಹಾಗಾಗಿ ಯಾವುದೇ ಪ್ರಶಸ್ತಿ ವಿಚಾರ ಬಂದಾಗ ನಮ್ಮ ಕರಾವಳಿ ಜಿಲ್ಲೆಯ ಶ್ರಮ ಇದ್ದೆ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರುಣತೀರ್ಥ ವೇದಿಕೆ ಅಧ್ಯಕ್ಷರಾದ ಉದಯ ದೇವಾಡಿಗ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜಾರಾಮ ಐತಾಳ್, ರಮೇಶ್ ಪ್ರಭು, ವೆಂಕಟೇಶ್ ಪ್ರಭು, ದಿನೇಶ್ ಗಾಣಿಗ, ಡಾ. ಎಚ್. ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

ಚಂದ್ರ ಆಚಾರಿ ಕೋಟ ಹಾಗೂ ಉಮೇಶ್ ಪ್ರಭು ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ನಂತರ ವರುಣತೀರ್ಥ ಕೆರೆಯ ಮುಂಭಾಗದಲ್ಲಿ ರುದ್ರಾಕ್ಷಿ ಗಿಡವನ್ನು ನೆಡಲಾಯಿತು.
ನಂತರ ರಾಜಾರಾಮ್ ಐತಾಳ್ ರವರು ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.