ಡೈಲಿ ವಾರ್ತೆ: 01/NOV/2023

ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌, ಕುಡಿಯುವ ನೀರು: ಸಿಎಂ ಘೋಷಣೆ

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ಮತ್ತು ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ನಗರದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವಕ್ಕೆ ಸರ್ಕಾರಿ ಶಾಲೆಗಳಿಗೆ ಉಚಿತ ಘೋಷಣೆಯ ಉಡುಗೊರೆ ನೀಡಿದರು.

ಉಚಿತ ವಿದ್ಯುತ್, ಕುಡಿಯುವ ನೀರು ಬೇಕು ಎಂದು ಶಿಕ್ಷಣ ಇಲಾಖೆ ಬೇಡಿಕೆ ಇಟ್ಟಿತ್ತು. ಇಂದಿನಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್‌, ಕುಡಿಯುವ ನೀರನ್ನು ಉಚಿತವಾಗಿ ನೀಡಲಾಗುವುದು ಎಂದು ವೇದಿಕೆಯಲ್ಲೇ ಸಿಎಂ ಘೋಷಿಸಿದರು.

ಇತ್ತೀಚೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿಯುವ ಪ್ರೀತಿ ಕಡಿಮೆ ಆಗುತ್ತಿದೆ. ಇಂಗ್ಲಿಷ್ ಮಾಧ್ಯಮಗಳ ಮೇಲಿನ ವ್ಯಾಮೋಹ ಜಾಸ್ತಿ ಆಗುತ್ತಿದೆ. ಕನ್ನಡ ಶಾಲೆಯಲ್ಲಿ ಓದಿದರೆ ಕೆಲಸ ಸಿಗುವುದಿಲ್ಲ ಎನ್ನುವ ಕಲ್ಪನೆ ಇದೆ. ಈ ಕಲ್ಪನೆ ಬಿಡಬೇಕು. ಕನ್ನಡ ಮಾಧ್ಯಮಗಳಲ್ಲಿ ಕಲಿಯುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ನಮ್ಮ ‌ಪ್ರಯತ್ನಕ್ಕೆ ಕೋರ್ಟ್‌ಗಳು ಸಹಕಾರ ನೀಡುತ್ತಿಲ್ಲ. ತಮ್ಮ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಅಂತ ಪೋಷಕರು ನಿರ್ಧಾರ ಮಾಡಬಹುದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ನಮ್ಮ ‌ಪ್ರಯತ್ನಕ್ಕೆ ಹಿನ್ನಡೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಕನಿಷ್ಠ SSLC ವರೆಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಬೇಕು ಎಂದು ಸಲಹೆ ನೀಡಿದರು.