ಡೈಲಿ ವಾರ್ತೆ: 04/NOV/2023
ನೇಪಾಳ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ; 69 ಜನ ಸಾವು
ನವದೆಹಲಿ:ನೇಪಾಳ ಮತ್ತು ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸುಮಾರು 20 ರಿಂದ 40 ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿ ಕಂಡು ಬಂದಿದೆ.
ಭೂಮಿಯ ತೀವ್ರ ಕಂಪನದಿಂದಾಗಿ ಜನರಲ್ಲಿ ಭೀತಿ ಉಂಟಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಹಳ ಸಮಯದವರೆಗೆ ನಡುಕ ಅನುಭವಿಸಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4 ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಕನಿಷ್ಠ 69 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ-ನೇಪಾಳ ಗಡಿಯಲ್ಲಿರುವ ಕತಿಹಾರ್, ಮೋತಿಹಾರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ.
ಉತ್ತರಭಾರತದಲ್ಲಿ ನಡುಗಿದ ಭೂಮಿ:ದೆಹಲಿ-ಎನ್‌ಸಿಆರ್, ಯುಪಿ, ಬಿಹಾರ, ಉತ್ತರಾಖಂಡ ಮತ್ತು ಹರಿಯಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭೂಕಂಪನದಿಂದಾಗಿ ಭೂಮಿ ನಡುಗಿದೆ. ಇದರ ತೀವ್ರತೆ ಹೆಚ್ಚಿದ್ದು, ಜನರು ಭಯಭೀತರಾಗಿದ್ದಾರೆ. ಈ ದಿಢೀರ್ ಭೂಕಂಪದಿಂದಾಗಿ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಹೈ ರೈಸ್ ಸೊಸೈಟಿಯ ಅಸೆಂಬ್ಲಿ ಪ್ರದೇಶದಲ್ಲೂ ಜನರು ಆತಂಕಕ್ಕೊಳಾಗಿರುವುದು ಕಂಡು ಬಂದಿದೆ.