ಡೈಲಿ ವಾರ್ತೆ: 08/NOV/2023
ಚಿತ್ರದುರ್ಗ: ಪೋಕ್ಸೋ ಪ್ರಕರಣ – ಮುರುಘಾ ಶ್ರೀಗೆ ಜಾಮೀನು ಮಂಜೂರು
ಬೆಂಗಳೂರು: ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ
ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಪ್ರಕರಣದಡಿ ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶ್ರೀಗೆ ಒಂದು ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದೆ.
ಚಿತ್ರದುರ್ಗಕ್ಕೆ ಮುರುಘಾ ಶ್ರೀಗಳಿಗೆ ಪ್ರವೇಶವಿಲ್ಲ ಸೇರಿದಂತೆ 7 ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಸಿಕ್ಕರೂ ಮುರುಘಾ ಶ್ರೀಗಳ ವಿರುದ್ಧದ ಮತ್ತೊಂದು ಪ್ರಕರಣದ ಅರ್ಜಿ ವಿಚಾರಣೆ ಬಾಕಿ ಇರುವುದರಿಂದ ಮುರುಘಾ ಶ್ರೀಗೆ ಸದ್ಯಕ್ಕೆ ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಪ್ರಕರಣವೇನು?: ಮುರುಘಾ ಮಠದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಯರು ನಮ್ಮ ಮೇಲೆ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮೈಸೂರಿನ ನಝರಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆ. 26ರಂದು ದೂರು ದಾಖಲಿಸಿದ್ದರು. ನಂತರ ಶರಣರನ್ನು 2022ರ ಸೆ.1ರಂದು ಪೊಲೀಸರು ಬಂಧಿಸಿದ್ದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.