ಡೈಲಿ ವಾರ್ತೆ: 09/NOV/2023

ಬಂಟ್ವಾಳ: ಕಾರಿಗೆ ಟಿಪ್ಪರ್ ಡಿಕ್ಕಿ – ಚಾಲಕ ಪಾರು

ಬಂಟ್ವಾಳ : ಜಲ್ಲಿ ಸಾಗಿಸುವ ಬೃಹತ್ ಗಾತ್ರದ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ನಡೆದಿದೆ.

ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಕೆ.ಎನ್.ಆರ್.ಸಿ. ಕಂಪೆನಿಯ ಲಾರಿ ಡಿಕ್ಕಿಯಾಗಿದೆ.

ಕೃಷ್ಣ ಅರಸ ಅವರ ಮಗಳು ಮೂಡಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು ಅವರು ಮೂಡಬಿದಿರೆಯ ಕಡೆಗೆ ಹೋಗುತ್ತಿದ್ದ ವೇಳೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಕೆ.ಎನ್.ಆರ್.ಸಿ.ಕಂಪೆನಿಯ ಲಾರಿ ಎದುರಿನಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.ಆದರೆ ಅದೃಷ್ಟವಶಾತ್ ಕಾರು ಚಾಲಕ ಕೃಷ್ಣ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಥಳದಲ್ಲಿ ಹಠಾತ್ ಪ್ರತಿಭಟನೆ.
ಕಂಪೆನಿಯ ಘನಗಾತ್ರದ ವಾಹನಗಳ ಸಂಚಾರದಿಂದ ಪ್ರಾಣಹಾನಿಯ ಜೊತೆಗೆ ಉತ್ತಮವಾಗಿದ್ದ ಡಾಮರು ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಕೆ.ಎನ್.ಆರ್.ಸಿ.ಕಂಪೆನಿಯ ಲಾರಿಗಳನ್ನು ತಡೆದು ಹಠಾತ್ ಪ್ರತಿಭಟನೆ ನಡೆಸಿದರು.

ಬಿ.ಸಿ.ರೋಡಿನಿಂದ ಅಡ್ಡಹೊಳೆ ವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಕಂಪೆನಿಯವರು ಕಾಮಗಾರಿ ನಡೆಸಲು ಜಲ್ಲಿಯನ್ನು ಕುಪ್ಪೆಪದವು ಎಂಬಲ್ಲಿರುವ ಜಲ್ಲಿ ಪ್ಲ್ಯಾಂಟ್ ನಿಂದ ಬೃಹತ್ ಗಾತ್ರದ ಲಾರಿಗಳ ಮೂಲಕ ತರುತ್ತಿದ್ದಾರೆ. ಆದರೆ ಕಂಪೆನಿಯ ಲಾರಿಯ ಚಾಲಕರು ಎ.ಸಿ.ಹಾಕಿಕೊಂಡು ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿ ಹಾಡು ಕೇಳಿಕೊಂಡು ಅಥವಾ ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಾ ರಸ್ತೆಯಲ್ಲಿ ಬರುವ ಇತರ ವಾಹನಗಳ ಬಗ್ಗೆ ಗಮನವಿಲ್ಲದೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಾರೆ ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಕಂಪೆನಿಯ ಲಾರಿಗಳು ಡಿಕ್ಕಿಯಾಗಿ ಅನೇಕರಿಗೆ ಗಾಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತ ನಡೆದ ಜಾಗದಲ್ಲಿ ಶಾಲೆಯಿದ್ದು, ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಅನಾಹುತಗಳು ನಡೆಯಬಹುದು, ಎಂದು ಇಲ್ಲಿ ಸೇರಿದ ಜನರು ಅರೋಪ ಮಾಡಿದ್ದಾರೆ.

ಕಂಪೆನಿ ವಿರುದ್ದ ಪ್ರಕರಣ ದಾಖಲಿಸಿ ಮತ್ತು ಕಂಪೆನಿ ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಕಿಟ್ ಹಾಕಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಕಂಪೆನಿ ಮತ್ತು ಲಾರಿ ಚಾಲಕರ ವಿರುದ್ದ ಸಾರ್ವಜನಿಕರು ರೊಚ್ಚಿಗೆದ್ದ ಘಟನೆ ನಡೆಯಿತು.

ಸ್ಥಳಕ್ಕೆ ಟ್ರಾಫಿಕ್ ಎಸ್.ಐ ಸುತೇಶ್, ಮತ್ತು ಸಂಜೀವ ಹಾಗೂ ಎ.ಎಸ್.ಐ ಸುರೇಶ್ ಪಡಾರ್, ಸಿಬ್ಬಂದಿಗಳಾದ ರಾಜು, ವಿವೇಕ್, ಸಂತೋಷ ಬೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.