ಡೈಲಿ ವಾರ್ತೆ: 09/NOV/2023

ಬಂಟ್ವಾಳ: ವ್ಯಕ್ತಿಯೋರ್ವನಿಗೆ ತಂಡದಿಂದ ಹಲ್ಲೆ – ದೂರು ದಾಖಲು

ಬಂಟ್ವಾಳ : ವ್ಯಕ್ತಿಯೋರ್ವನನ್ನು ಮಾತುಕತೆ ನಡೆಸುವ ನೆಪದಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿ ತಂಡವೊಂದು ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಕಸಬಾ ಗ್ರಾಮದ ನಿವಾಸಿ ನೌಷಾದ್ (35) ಎಂಬವರರು ಹಲ್ಲೆಗೊಳಗಾಗಿದ್ದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ನೌಶಾದ್ ಅವರು ನ 6 ರಂದು ತನ್ನ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವೇಳೆ ತುಂಬೆ ಜಂಕ್ಷನ್ ಬಳಿ ತಲುಪಿದಾಗ ಹಿಂದಿನಿಂದ ಬಂದ ಕಾರು ಸ್ಕೂಟರಿಗೆ ಅಡ್ಡ ನಿಲ್ಲಿಸಿ ಅದರೊಳಗಿದ್ದ ನೌಶಾದ್ ಅವರ ಹೆಂಡತಿ ಕಡೆಯ ಜುನೈದ್ ಹಾಗೂ ಇತರರು ಬಂದು ನಿನ್ನ ಹೆಂಡತಿಯ ವಿಷಯದಲ್ಲಿ ಮಾತನಾಡಲಿಕ್ಕಿದೆ, ಕಲಾಯಿ ಮನೆಗೆ ಬರುವಂತೆ ತಿಳಿಸಿ ಒತ್ತಾಯದಿಂದ ಕಾರಿನಲ್ಲಿ ಕುಳ್ಳಿರಿಸಿ, ನೌಶಾದ್ ಅವರ ಹೆಂಡತಿಯ ಅಣ್ಣ ಇದ್ದಿಮೋನು ಎಂಬವರ ಮನೆಗೆ ಕರೆದುಕೊಂಡು ಹೋಗಿರುತ್ತಾರೆ.

ಅಲ್ಲಿ ಖಲಂದರ್ ಹಾಗೂ ತಮೀಮ್ ಎಂಬವರು ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಬಳಿಕ ಅದೇ ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಅಲ್ಲಿಂದ ಅಡ್ಡೂರಿನಲ್ಲಿರುವ ಹೆಂಡತಿಯ ಅಣ್ಣ ಯಾಕೂಬ್ ಎಂಬವರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರ ಮಕ್ಕಳಾದ ಜುನೈದ್, ಮನ್ಸೂರು, ಇಮ್ಮಿಯಾಜ್ ಹಾಗೂ ಸ್ನೇಹಿತರು ಮರದ ದೊಣ್ಣೆಯಿಂದ ಹಲ್ಲೆ ಮಾಡಿ, ಜುನೈದ್ ಎಂಬಾತನು ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿರುತ್ತಾರೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ನೌಶಾದ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2023 ಕಲಂ 363, 323, 504, 324, 341, 342, 506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.