ಡೈಲಿ ವಾರ್ತೆ: 10/NOV/2023
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ
ಬೆಂಗಳೂರು: ದೀಪಾವಳಿಗೆ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಗಿಫ್ಟ್ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ನೇಮಕಗೊಳಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿಜಯೇಂದ್ರ ಅವರನ್ನು ನೇಮಕಗೊಳಿಸಿದ ಆದೇಶ ಪ್ರಕಟಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಕೆಳಗಡೆ ಇಳಿಸಬೇಕು ಎಂಬ ಆಗ್ರಹ ಪಕ್ಷದ ಒಳಗಡೆಯಿಂದಲೇ ಬಂದಿತ್ತು. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಿಟಿ ರವಿ ಹೆಸರು ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆಗಿರುವ ಬಿವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಸಿಎಂ ಪಟ್ಟದಿಂದ ಇಳಿಸಿದ್ದ ಕಾರಣ ಪಕ್ಷಕ್ಕೆ ಹಿನ್ನಡೆಯಾಗಿದೆ. ಯಡಿಯೂರಪ್ಪನವರನ್ನು ಕಡೆಗಣನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಹೈಕಮಾಂಡ್ ಅಳೆದು ತೂಗಿ ಲೋಕಸಭಾ ಚುನಾವಣೆ ಮತ್ತು ಪಕ್ಷದ ಸಂಘಟನೆ ದೃಷ್ಟಿಯಿಂದ ಬಿವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನದಂತಹ ಮಹತ್ವದ ಜವಾಬ್ದಾರಿ ನೀಡಿದೆ.
ವಿಜಯೇಂದ್ರ ಯುವ ನಾಯಕರಾಗಿರುವ ಕಾರಣ ಕಾರ್ಯಕರ್ತರ ಪಡೆ ಇನ್ನಷ್ಟು ಬಲವಾಗುವ ಜತೆಗೆ ಪಕ್ಷ ಸಂಘಟನಾ ಸಾಮರ್ಥ್ಯವು ಹೆಚ್ಚಾಗುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಇದರ ಜೊತೆ ಪ್ರಬಲ ಸಮುದಾಯವಾದ ಲಿಂಗಾಯತ ಮತಬ್ಯಾಂಕ್ ರಕ್ಷಣೆ, ಸಮುದಾಯದ ನಾಯಕರ ವಲಸೆ ತಡೆಗೂ ಬ್ರೇಕ್ ಬೀಳುವ ಸಾಧ್ಯತೆಯಿದೆ.