

ಡೈಲಿವಾರ್ತೆ:14/ಮಾರ್ಚ್/2026


ಡಿಸಿ, ಎಡಿಸಿ ಡಿಜಿಟಲ್ ಸಹಿ ದುರುಪಯೋಗ; 15 ಲಕ್ಷ ರೂ. ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರ ಬಂಧನ

ಚಿತ್ರದುರ್ಗ: ಜಿಲ್ಲಾಡಳಿತದ ಆಡಳಿತ ಯಂತ್ರದಲ್ಲೇ ಭಾರೀ ಅಕ್ರಮವೊಂದು ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ವೇತನದ ಬಿಲ್ ಸೃಷ್ಟಿಸಿ ಹಣ ಲಪಟಾಯಿಸಲು ಯತ್ನಿಸಿದ ಐವರು ಹೊರಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಎಲ್‌ಟಿಸಿ (CLTC) ವಿಭಾಗದ ಸಿಬ್ಬಂದಿ ಈ ವಂಚನೆಯ ಜಾಲ ಹೆಣೆದಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಿಜಿಟಲ್ ಸಹಿಯ ‘ಕೀ’ಗಳನ್ನು ಕಳ್ಳತನ ಮಾಡಿ, ಆ ಮೂಲಕ 15 ಲಕ್ಷ ರೂಪಾಯಿಗಳ ನಕಲಿ ವೇತನದ ಬಿಲ್ ಸಿದ್ಧಪಡಿಸಿ ಜಿಲ್ಲಾ ಖಜಾನೆಗೆ ಕಳುಹಿಸಲಾಗಿತ್ತು.
ಖಜಾನೆ ಇಲಾಖೆಗೆ ಬಂದ ಬಿಲ್‌ಗಳನ್ನು ಪರಿಶೀಲಿಸುವಾಗ ಅಧಿಕಾರಿಗಳಿಗೆ ಡಿಜಿಟಲ್ ಸಹಿಯ ಬಗ್ಗೆ ತೀವ್ರ ಸಂಶಯ ವ್ಯವಸ್ಥವಾಗಿದೆ. ತಕ್ಷಣವೇ ಇಲಾಖೆಯಿಂದ ಆಕ್ಷೇಪಣೆ ವ್ಯಕ್ತಪಡಿಸಿ ಮಾಹಿತಿ ಕೇಳಿದಾಗ, ಈ ಬೃಹತ್ ಜಾಲದ ನೈಜ ಮುಖವಾಡ ಕಳಚಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಂಧಿತರು ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಮತ್ತು ವೆಂಕಟೇಶ್. ತಲೆಮರೆಸಿಕೊಂಡಿರುವ ಆರೋಪಿಗಳು ಪ್ರಮುಖ ಆರೋಪಿ (A1) ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್ ಸದ್ಯ ಪರಾರಿಯಾಗಿದ್ದು, ಈತನೇ ಡಿಎಸ್‌ಸಿ ಕೀ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.
”ಜಿಲ್ಲಾಧಿಕಾರಿಗಳ ಕಚೇರಿಯ ಘನತೆಗೆ ಕುಂದು ತರುವ ಇಂತಹ ಕೃತ್ಯವನ್ನು ಸಹಿಸುವುದಿಲ್ಲ. ಈಗಾಗಲೇ ಐವರು ಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಹಾಗೂ ಒಬ್ಬ ಸರ್ಕಾರಿ ನೌಕರನನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದ್ದಾರೆ.