ಡೈಲಿ ವಾರ್ತೆ: 11/NOV/2023

ಚೆನ್ನೈ – ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ಸಾವು, 60 ಮಂದಿಗೆ ಗಾಯ

ಚೆನ್ನೈ: ಶನಿವಾರ ಮುಂಜಾನೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಮತ್ತು ಓಮ್ನಿಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು, ಸುಮಾರು 60 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಮಾರು 10 ಅಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮೀಪದ ಚೆಟ್ಟಿಯಪ್ಪನೂರಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ಸಂಸ್ಥೆಯ ಬಸ್ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಓಮ್ನಿಬಸ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಗುಡುವಂಚೇರಿಯ ರಿತಿಕಾ (32), ವಾಣಿಯಂಬಾಡಿಯ ಮೊಹಮ್ಮದ್ ಫಿರೋಜ್ (37), ಎಸ್‌ಇಟಿಸಿ ಬಸ್ ಚಾಲಕ ಕೆ ಎಲುಮಲೈ (47) ಮತ್ತು ಚಿತ್ತೂರಿನ ಬಿ ಅಜಿತ್ (25) ಸ್ಥಳದಲ್ಲೇ ಮೃತಪಟ್ಟರೆ, ಓಮ್ನಿಬಸ್ ಚಾಲಕ ಎನ್ ಸೈಯದ್ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಎಸ್‌ಇಟಿಸಿ ಬಸ್ ಮೀಡಿಯನ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಓಮ್ನಿಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳನ್ನು ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ಮತ್ತು ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.