ಡೈಲಿ ವಾರ್ತೆ: 11/NOV/2023

ಐಸಿಸ್‌ ಪರ ಕೆಲಸ: ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳು ಬಂಧನ

ಲಕ್ನೋ: ಐಸಿಸ್‌ (ISIS) ಪರವಾಗಿ ಕೆಲಸ ಮಾಡುತ್ತಿದ್ದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಆರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಆರು ವ್ಯಕ್ತಿಗಳನ್ನು ಬಂಧಿಸುವುದರೊಂದಿಗೆ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಭಯೋತ್ಪಾದಕ ಜಾಲವು ಬೆಳಕಿಗೆ ಬಂದಿದೆ. ಆರು ಮಂದಿಯಲ್ಲಿ ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ.

ಎಲ್ಲಾ ಬಂಧಿತ ಆರೋಪಿಗಳು ಅಲಿಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಬಂಧಿತ ಆರೋಪಿಗಳು ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು. ವಿದ್ಯಾರ್ಥಿ ಸಂಘದ ಸಭೆಗಳು ಐಸಿಸ್‌ನ ಹೊಸ ನೇಮಕಾತಿ ಸೆಲ್ ಆಗಿ ಮಾರ್ಪಟ್ಟಿವೆ ಎಂದು ಹೇಳಿಕೊಂಡಿದೆ.

ಮೂಲಗಳ ಪ್ರಕಾರ, ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈಗ ಕೇಂದ್ರೀಯ ತನಿಖಾ ಸಂಸ್ಥೆಗಳ ನಿಗಾದಲ್ಲಿದ್ದಾರೆ.
ಪುಣೆ ಇಸ್ಲಾಮಿಕ್ ಸ್ಟೇಟ್ ಮಾಡ್ಯೂಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿರುವ ರಿಜ್ವಾನ್ ಮತ್ತು ಶಹನವಾಜ್ ಅವರ ವಿಚಾರಣೆಯ ವೇಳೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ದೇಶವಿರೋಧಿ ಅಜೆಂಡಾವನ್ನು ಹರಡಲು ತೊಡಗಿರುವ ವಿಚಾರ ತಿಳಿದುಬಂದಿತ್ತು. ಇಬ್ಬರ ವಿಚಾರಣೆಯ ನಂತರ ಉತ್ತರ ಪ್ರದೇಶ ಎಟಿಎಸ್‌ ಆರು ವಿದ್ಯಾರ್ಥಿಗಳನ್ನು ಬಂಧಿಸಿದೆ.