ಡೈಲಿ ವಾರ್ತೆ: 14/NOV/2023

ಉಡುಪಿ: ಒಂದೇ ಕುಟುಂಬ ನಾಲ್ವರ ಕೊಲೆ ಪ್ರಕರಣ – ಹಸೀನಾನೇ ಕೊಲೆಗಾರನ ಟಾರ್ಗೆಟ್.? ಹಣಕಾಸು ವ್ಯವಹಾರ ಬಗ್ಗೆ ಶಂಕೆ, ಆರೋಪಿಗಾಗಿ ತೀವ್ರ ಶೋಧ

ಕೊಲೆಗಾರ

ಉಡುಪಿ:ಉಡುಪಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಬೇಧಿಸಲು ಪೊಲೀಸರು ಆಹೋ ರಾತ್ರಿ ಶ್ರಮ ಪಡುತ್ತಿದ್ದಾರೆ.
ಅಲ್ಲದೆ ಈ ಕೊಲೆಯ ಕುರಿತು ಹಲವು ಅನುಮಾನಗಳು ಮೂಡಿವೆ. ಕೊಲೆಗಾರ ಹಸೀನಾನನ್ನೇ ಟಾರ್ಗೆಟ್ ಮಾಡಿ ಬಂದಿರುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ.

ಕೊಲೆಗಾರ ಮನೆಯಲ್ಲಿ ಹಸೀನಾ ಮತ್ತು ವೃದ್ಧೆ ಹಾಜಿರಾ ಇರಬಹುದೆಂದು ಅಂದಾಜಿಸಿದ್ದನು. ಆದರೆ ಹಿಂದಿನ ದಿನವಷ್ಟೇ ಮಂಗಳೂರಿಂದ ಅಯ್ನಾಸ್ ಮತ್ತು ಅಫ್ನಾನ್ ಮನೆಗೆ ಬಂದಿದ್ದರು. ಹಸೀನಾ ಕೊಲ್ಲಲು ಬಂದವನು ಮನೆಯಲ್ಲಿ ಹೆಣ್ಣು ಮಕ್ಕಳನ್ನು‌ ಕಂಡಿದ್ದಾನೆ. ಹೀಗಾಗಿ ಎದುರಿಗೆ ಬಂದ ಅಫ್ನಾನ್ ಮತ್ತು ಅಯ್ನಾಸ್ನನ್ನು ಕೂಡ ಕೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಹಸೀನಾ ಟಾರ್ಗೆಟ್ ಆಗಲು ಕಾರಣವೇನು? ಕೊಲೆಗಡುಕ ಸಾಕ್ಷಿ ನಾಶ ಮಾಡಲು ಎಲ್ಲರನ್ನೂ ಕೊಂದು ಹೋದನಾ ಎಂಬೆಲ್ಲಾ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಳ್ಳಲು ಮುಂದಾಗಿದ್ದಾರೆ. ಹಸೀನಾರ ಕಾಲ್ ಡೀಟೇಲ್ಸ್ ಆಧಾರದಲ್ಲಿ ತನಿಖೆ ತೀವ್ರಗೊಳಿದ್ದಾರೆ. ಅಲ್ಲದೆ ನಾಲ್ವರ ಕಗ್ಗೊಲೆ ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಹಾಜಿರ ಎನ್ನುವ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಪೊಲೀಸರು ಐದು‌ ತಂಡ ಮಾಡಿ ತನಿಖೆ ತೀವ್ರಗೊಳಿಸಿದ್ದು, ಸ್ನೇಹಿತರು, ಸಂಬಂಧಿಕರನ್ನ ವಿಚಾರಣೆ ಮಾಡುತ್ತಿದ್ದಾರೆ. ಅದರ ಜೊತೆಗೆ ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.
ಕೊಲೆಗೆ ಆರ್ಥಿಕ ವ್ಯವಹಾರ ಕಾರಣವೆಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಹಸೀನಾ ಯಾರಿಗೆ ಹಣ ನೀಡಿದ್ದರು ಮತ್ತು ಹಣ ನೀಡಿದ ಉದ್ದೇಶವೇನು? ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ದುಬೈ ನಿಂದ ಬಂದ ಪತಿ ಮತ್ತು ಘಟನೆಯ ವೇಳೆ ಬೆಂಗಳೂರಿನಲ್ಲಿದ್ದ ಪುತ್ರನಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೊಲೆ ನಡೆದು 2 ದಿನ ಕಳೆದರು ಈವರೆಗೆ ಪೊಲೀಸರಿಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಅದರಲ್ಲೂ ಖತರ್ನಾಕ್ ಕೊಲೆಗಾರ ಉಡುಪಿ ನಗರದೊಳಗೆ ನಾಲ್ಕು ಬಾರಿ ವಾಹನ ಬದಲಾಯಿಸಿ ತಲೆಮರಿಸಿಕೊಂಡಿದ್ದಾನೆ. ಮತ್ತೊಂದೆಡೆ ಹಸೀನಾ ಮತ್ತು ಮೂವರು ಮಕ್ಕಳನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲಾಯಿತೇ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.

ಚಾಣಾಕ್ಷ ಕೊಲೆಗಾರ ಎಲ್ಲರ ಕಣ್ಣಿಗೂ ಮಣ್ಣೆರೆಚಿದ್ದಾನೆ. ಸಾಕಷ್ಟು ಸಿಸಿಟಿವಿ ಫೂಟೇಜ್ ಸಿಕ್ಕರು ಆರೋಪಿಯ ಪತ್ತೆ ಮಾಡಲು ಪೊಲೀಸರಿಂದ ಹರಸಾಹಸ ಪಡುತ್ತಿದ್ದಾರೆ. ಆದರೆ ಕೊಲೆ ನಡೆದ ಸ್ಥಳದಲ್ಲಿ ಕೊಲೆಗಡುಕನ ಕೂದಲು ಸಿಕ್ಕಿದೆ. ಹಸೀನಾ ಕೈಯಲ್ಲಿ ಆರೋಪಿಯ ತಲೆಕೂದಲು ಸಿಕ್ಕಿದ್ದು, ಇದೇ ಆಧಾರದ ಮೇಲೆ ಕೊಲೆಗಾರ ಪೊಲೀಸರ ಬಲೆ ಬೀಳುವ ಸಾಧ್ಯತೆ ಇದೆ.