ಡೈಲಿ ವಾರ್ತೆ: 14/NOV/2023
ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿಗೆ ಗಲ್ಲು
ಕೊಚ್ಚಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದ ಅಪರಾಧಿಗೆ ಕೇರಳದ ವಿಶೇಷ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಬಿಹಾರ ಮೂಲದ ಅಪರಾಧಿ ಅಶ್ವಕ್ ಆಲಂ 5 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದಿದ್ದ. ಆತನನ್ನು ಗಲ್ಲಿಗೇರಿಸುವಂತೆ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶ ಕೆ ಸೋಮನ್ ಆದೇಶಿಸಿದ್ದಾರೆ.
ಅಪರಾಧಿಗೆ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಅಡಿಯಲ್ಲಿ ಅತ್ಯಾಚಾರ ಮತ್ತು ತೀವ್ರತರವಾದ ಲೈಂಗಿಕ ದೌರ್ಜನ್ಯದ ವಿವಿಧ ಅಪರಾಧಗಳಿಗಾಗಿ ಐದು ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಜೀವಾವಧಿ ಶಿಕ್ಷೆ ಎಂದರೆ ಅಪರಾಧಿ ತನ್ನ ಸಹಜ ಜೀವನ ಪಯರ್ಂತ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ 6 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಸಿಎಂ ಪಿಣರಾಯಿ ವಿಜಯನ್, ಮಕ್ಕಳ ದಿನದಂದು ಪ್ರಕರಣದಲ್ಲಿ ನೀಡಿದ ಶಿಕ್ಷೆಯನ್ನು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರಿಗೆ ಬಲವಾದ ಎಚ್ಚರಿಕೆಯಾಗಿದೆ. ಪಾಲಕರು ಅನುಭವಿಸಿದ ನೋವನ್ನು ಯಾವುದೂ ತುಂಬಲು ಸಾಧ್ಯವಿಲ್ಲ. ಸರ್ಕಾರವು ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಒಂದೇ ತಿಂಗಳಲ್ಲಿ ತನಿಖೆ ಪೂರ್ಣಗೊಂಡಿದೆ. ಘಟನೆಯ ನಂತರ 100ನೇ ದಿನದಂದು ಆರೋಪಿಗೆ ಶಿಕ್ಷೆ ವಿಧಿಸಲಾಯಿತು. ಚಾರ್ಜ್ ಶೀಟ್‍ನಲ್ಲಿ ಎಲ್ಲಾ 16 ಅಪರಾಧಗಳಲ್ಲಿ ಆಲಂ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ. 16ರಲ್ಲಿ ಐದು ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತದೆ ಎಂದು ಪ್ರಾಸಿಕ್ಯೂಷನ್ ಈ ಹಿಂದೆ ಹೇಳಿತ್ತು.
ಏನಿದು ಪ್ರಕರಣ?
ಜುಲೈ 28 ರಂದು ಆಲುವಾ ಎಂಬಲ್ಲಿ ಮನೆಯಲ್ಲಿದ್ದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಬಳಿಕ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು. ನಂತರ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜವುಗು ಪ್ರದೇಶದಲ್ಲಿ ಬಾಲಕಿಯ ಶವವನ್ನು ಬಣವೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಅಪರಾಧಿಯನ್ನು ಬಂಧಿಸಿದ್ದರು.