ಡೈಲಿ ವಾರ್ತೆ: 15/NOV/2023
50ನೇ ಶತಕ ಸಂಭ್ರಮದಲ್ಲಿ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ..!
ಮುಂಬೈ: ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದಾಖಲೆಯೊಂದನ್ನ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಪುಡಿಪುಡಿ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕ್ಷಣವನ್ನು ಅಭೀಮಾನಿಗಳು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು. ಇದೇ ವೇಳೆ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಟೇಡಿಯಂನಿಂದಲೇ ಶಿರಬಾಗಿ ನಮಸ್ಕರಿದರು. ಪ್ರತಿಯಾಗಿ ಸಚಿನ್ ತೆಂಡೂಲ್ಕರ್ ಅವರು ಎದ್ದುನಿಂತು ಚಪ್ಪಾಳೆ ಬಾರಿಸುವ ಮೂಲಕ ಗೌರವ ತೋರಿದರು. ಈ ಸಂದರ್ಭದಲ್ಲಿ ಪತ್ನಿಯನ್ನು ಕೊಹ್ಲಿ ಮರೆಯಲಿಲ್ಲ. ಅನುಷ್ಕಾ, ಕೊಹ್ಲಿಯತ್ತ ನೋಡುತ್ತಲೇ ಮುತ್ತಿನ ಸುರಿಮಳೆ ಸುರಿಸಿದರು. ಕೊಹ್ಲಿ ಸಹ ಅನುಷ್ಕಾಗೆ ಗಾಳಿಯಲ್ಲಿ ಮುತ್ತು ತೇಲಿಸಿ ತಮ್ಮ ಪ್ರೀತಿ ಹಂಚಿಕೊಂಡರು. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ್ದರೆ, ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದರು. ಬುಧವಾರ (ನ.15) ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 106 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಒಟ್ಟು 113 ಎಸೆತಗಳನ್ನು ಎದುರಿಸಿದ ಕೊಹ್ಲಿ 117 ರನ್ (2 ಸಿಕ್ಸರ್, 9 ಬೌಂಡರಿ) ಬಾರಿಸಿ ಔಟಾದರು.
ಕಿವೀಸ್ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 80ನೇ ಶತಕ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 50 ಶತಕ ಸಿಡಿಸಿದ್ದಾರೆ. ಇನ್ನೂ 49 ಶತಕಗಳನ್ನು ಸಿಡಿಸಿರುವ ಸಚಿನ್ ತೆಂಡೂಲ್ಕರ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.