ಡೈಲಿ ವಾರ್ತೆ: 22/NOV/2023
ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡಿಸಿ ಕೊಡುವುದಾಗಿ ನಂಬಿಸಿ 35 ಲಕ್ಷ ರೂ. ವಂಚನೆ: ಜ್ಯುವೆಲ್ಲರಿ ಶಾಪ್ ಮಾಲೀಕ ಬಂಧನ
ಚಿಕ್ಕಬಳ್ಳಾಪುರ: ಇಬ್ಬರು ನಿವೃತ್ತ ಸೈನಿಕರಿಗೆ ಜಮೀನು ಮಂಜೂರು ಮಾಡಿಸಿ ಕೊಡುವುದಾಗಿ ಡಿಸಿ ಆರ್ಡರ್ ಮಾಡಿಸಿ ಕೊಡುತ್ತೇನೆ ಎಂದು 35 ಲಕ್ಷ ರೂ. ವಸೂಲಿ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಗಂಗಮ್ಮ ಗುಡಿ ಬಜಾರ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ಮಾಲೀಕ ಸೂರ್ಯನಾರಾಯಣಚಾರಿ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ, ನನಗೆ ಆ ಅಧಿಕಾರಿ ಗೊತ್ತು, ಈ ಅಧಿಕಾರಿ ಗೊತ್ತು ಎಂದು ನಿವೃತ್ತ ಸೈನಿಕನಿಗೆ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿ ಕೊಡುತ್ತೇನೆ ಎಂದು ಇಬ್ಬರು ನಿವೃತ್ತ ಸೈನಿಕರಿಗೆ ಲಕ್ಷ ಲಕ್ಷ ರೂ. ಹಣವನ್ನು ವಂಚಿಸಿದ್ದಾನೆ.
ಆರೋಪಿ, ಗೌರಿಬಿದನೂರಿನ ದೊಡ್ಡಕುರುಗೋಡು ಗ್ರಾಮದ ಮಾಜಿ ಸೈನಿಕ ಮಾಕರ್ಂಡೇಯ ಹಾಗೂ ಮರಿಯಪ್ಪನಪಾಳ್ಯದ ಮಾಜಿ ಸೈನಿಕ ಅನಂದ್ ಕುಮಾರ್ ಬಳಿ ಡಿಸಿ ಆರ್ಡರ್ ಮಾಡಿಸಿಕೊಡುವುದಾಗಿ ಹೇಳಿ ಬರೋಬ್ಬರಿ 35 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ.
2019 ರಲ್ಲಿ ಜಮೀನು ಮಂಜೂರು ಮಾಡುವಂತೆ ಮಾಕರ್ಂಡೇಯ ಹಾಗೂ ಆನಂದ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಗೌರಿಬಿದನೂರು ತಹಶೀಲ್ದಾರ್ ಹಾಗೂ ಚಿಕ್ಕಬಳ್ಳಾಪುರ ಎಸಿ ಕಚೇರಿಯಲ್ಲಿ ಫೈಲ್ ಮೂವ್ ಆಗಿತ್ತು. ಕೊನೆಗೆ ಡಿಸಿ ಕಚೇರಿಯಲ್ಲಿ ಕಡತ ಹಾಗೆಯೇ ಒಂದು ವರ್ಷ ಉಳಿದಿತ್ತು. ಇದರಿಂದ ದಿಕ್ಕು ತೋಚದ ಇಬ್ಬರು ಮಾಜಿ ಸೈನಿಕರು, ಸಂಬಂಧಿಕರೊಬ್ಬರಿಂದ ಸೂರ್ಯನಾರಾಯಣಚಾರಿಯ ಪರಿಚಯ ಮಾಡಿಕೊಂಡು ಅರ್ಜಿ ಮೂವ್ ಮಾಡಲು ಮುಂದಾಗಿದ್ದಾರೆ.
ಮಾಜಿ ಸೈನಿಕರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡ ಆರೋಪಿ ಲಕ್ಷ ಲಕ್ಷ ಹಣ ಪಡೆದಿದ್ದಾನೆ. ಬಳಿಕ ಆರೋಪಿ ವಂಚಿಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಮಾಜಿ ಸೈನಿಕರು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗಿದ್ದರೂ ಕ್ರಮ ಕೈಗೊಳ್ಳದ ಕಾರಣ ಶಾಸಕ ಪ್ರದೀಪ್ ಈಶ್ವರ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬಳಿಕ ಶಾಸಕರು ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬಂಧನದ ವೇಳೆ ಪೊಲೀಸರ ಮೇಲೆಯೇ ಆರೋಪಿ ದರ್ಪ ತೋರಿಸಿದ್ದಾನೆ. ಹೀಗಾಗಿ ವಂಚನೆ ಪ್ರಕರಣದ ಜೊತೆಗೆ ಕರ್ತವ್ಯಕ್ಕೆ ಅಡ್ಡಿ ಆರೋಪದಡಿಯೂ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.