ಡೈಲಿ ವಾರ್ತೆ: 07/DEC/2023
ಮೌಲ್ವಿಗಳ ಸಮಾವೇಶದಲ್ಲಿ ಮುಸ್ಲಿಮರಿಗೆ 10 ಸಾವಿರ ಕೋಟಿ ಹೇಳಿಕೆಗೆ ಸಿದ್ದರಾಮಯ್ಯ ವಿವರಣೆ ನೀಡಬೇಕು: ಕೋಟ ಶ್ರೀನಿವಾಸ ಪೂಜಾರಿ
ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಅನುದಾನ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಇಂದು ಪರಿಷತ್‌ನಲ್ಲಿ ಸದ್ದು ಮಾಡಿತು. ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು.
ಸಿಎಂ ಸಿದ್ದರಾಮಯ್ಯನವರು ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಮಾತನಾಡುತ್ತಾರೆ. ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಹಾಗೂ 10 ಕೋಟಿ ರೂ. ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಹಣ ಮೀಸಲಿಟ್ಟರೇ ಯಾರದ್ದೇ ವಿರೋಧವಿಲ್ಲ. ಆದರೆ ಸಿಎಂ ಅವರು ಅಲ್ಪ ಸಂಖ್ಯಾತ ಸಮುದಾಯಕ್ಕೆ 10,000 ಕೋಟಿ ರೂ. ನೀಡುತ್ತೇನೆ ಎಂದಿದ್ದಾರೆ ಇದು ಸರಿಯಲ್ಲ ಎಂದರು.
ಸರ್ಕಾರ ಪರಿಶಿಷ್ಠ ಜಾತಿ- ಪಂಗಡಗಳಿಗೆ ಮೀಸಲಿಟ್ಟ 11,500 ಕೋಟಿ ರೂ. ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ, ಸಮಾಜದ ಕಟ್ಟ ಕಡೆಯ ಬಡ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ವರನ್ನೊಳಗೊಂಡ ಸಮಾಜ ನಿರ್ಮಾಣ ಮಾಡುವ ಭರವಸೆ ನೀಡಿರುವ ಸಿದ್ದರಾಮಯ್ಯನವರು ಒಂದು ವರ್ಗವನ್ನು ಒಲೈಸುವ ಭರದಲ್ಲಿ, ಸಮಾಜದ ಪರಿಶಿಷ್ಠ ಜಾತಿ ಹಿಂದುಳಿದ ವರ್ಗದ ಬಡವನರನ್ನು ನಿರ್ಲಕ್ಷಿಸುತ್ತಿದ್ದಾರೆ ಅಂತ ಕಿಡಿಕಾರಿದರು.
ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಠ ಜಾತಿ-ಪಂಗಡಗಳಿಗೆ ಸೇರಿದ ವಸತಿ ನಿಲಯಗಳಲ್ಲಿನ ಸಾವಿರಾರು ಬಡ ಮಕ್ಕಳು ಹಾಸ್ಟೆಲ್‌ಗಳ ಪ್ರವೇಶ ದೊರಕದೆ ಸೌಲಭ್ಯ ವಂಚಿತರಾಗಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವಿಲ್ಲದೇ ಪರದಾಡುತ್ತಿದ್ದಾರೆ. 10,000 ಮಹಿಳೆಯರಿಗೆ ಹೊಲಿಗೆ ಯಂತ್ರ ಮಂಜೂರಾಗಿದ್ದರೂ ಬಡ ನಿರುದ್ಯೋಗಿಗಳಿಗೆ ಮಹಿಳೆಯರಿಗೆ ನೀಡದೇ ಸತಾಯಿಸುವ ಕೆಲಸವಾಗುತ್ತಿದೆ. 471 ಹಿಂದುಳಿದ ವರ್ಗಗಳ ಸಮುದಾಯ ಭವನಗಳಿಗೆ ಅನುದಾನ ಮಂಜುರಾಗಿ ಆದೇಶವಾಗಿದ್ದರೂ ಹಣ ಬಿಡುಗಡೆ ಮಾಡದೇ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಪರಿಶಿಷ್ಟ ವರ್ಗಗಳಿಗೆ ಮೀಸಲಿರಿಸಿರುವ ಅನುದಾವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದರಿಂದ, ಪರಿಶಿಷ್ಠ ವರ್ಗಗಳ ಬಡ ಜನರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂತಹ ಜಾತ್ಯತೀತ ಸರ್ಕಾರ, ರಾಜಕಾರಣಕ್ಕಾಗಿ ಕೇವಲ ಒಂದು ಧರ್ಮದ ಒಲೈಕೆಗಾಗಿ 10,000 ಕೋಟಿ ರೂ. ನೀಡುವುದಾಗಿ ಹೇಳುತ್ತಿರುವುದು ಮತ್ತು ಉಳಿದೆಲ್ಲಾ ಹಿಂದುಳಿದ ವರ್ಗಗಳನ್ನು ಹಾಗೂ ಪರಿಶಿಷ್ಟರನ್ನು ನಿರ್ಲಕ್ಷಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಆತಂಕಕಾರಿಯಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಪೂಜಾರಿ ಒತ್ತಾಯ ಮಾಡಿದರು. ಕೋಟ ಪ್ರಸ್ತಾಪಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತರ ಕೊಡಿಸುವುದಾಗಿ ಸಭಾ ನಾಯಕ ಬೋಸರಾಜು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ನಿಮ್ಮ ಆಸ್ತಿ ಮಾರಿ ಹಣ ಕೊಡಿ: ಸಿಎಂ ವಿರುದ್ಧ ರೇಣುಕಾ ವಾಗ್ದಾಳಿ