ಡೈಲಿ ವಾರ್ತೆ: 12/Jan/2024
ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ – ಆರೋಪಿಗಳ ಬಂಧನ
ಬಂಟ್ವಾಳ : ಬಿ.ಸಿ.ರೋಡಿನ ಹೃಯಭಾಗದ ಹೊಟೇಲ್ ಸಹಿತ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಬಂಧಿತ ಆರೋಪಿ.
ಕಳೆದ ಎರಡು ವಾರಗಳ ಹಿಂದೆ ಬಿ.ಸಿ.ರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಲಾಗಿತ್ತು , ಈ ಬಗ್ಗೆ ಹೊಟೇಲ್ ಅನಿಯಾ ದರ್ಬಾರ್ ಮಾಲಕ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ಕಳವು ಮಾಡುವ ದೃಶ್ಯಗಳು ಹೊಟೇಲ್ ನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿತ್ತು ಇದರ ಆಧಾರದ ಮೇಲೆ ಪೋಲಿಸ್ ತಂಡ ಬಂಧನಕ್ಕೆ ಕಾರ್ಯತಂತ್ರ ಹೆಣೆದಿದ್ದರು.
ಹಮೀದ್ ಮಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದ ವೇಳೆ ಬಂಟ್ವಾಳದಲ್ಲಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು, ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಿವಿಧ ಠಾಣೆಗಳಲ್ಲಿ ವಾರೆಂಟ್ ಆರೋಪಿ ಕೂಡ ಆಗಿರುವುದು ಪೋಲಿಸ್ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ.
ಇದೀಗ ಈತನನ್ನು ಬಂಟ್ವಾಳ ಡಿ.ವೈಎಸ್.ಪಿ. ವಿಜಯಪ್ರಸಾದ್ ಅವರ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ರಾಮಕೃಷ್ಣ ಮತ್ತು ಕಲೈಮಾರ್ ಅವರ ತಂಡದಲ್ಲಿ ಸಿಬ್ಬಂದಿಗಳಾದ ಇರ್ಷಾದ್. ಪಿ ಮತ್ತು ರಾಜೇಶ್ ,ಅವರು ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾದ ಬಂಟ್ವಾಳ ಪೊಲೀಸರು
ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಎರಡು ಸರಣಿ ಕಳವು ಪ್ರಕರಣಗಳು ನಡೆದಿದ್ದು, ಎರಡು ಪ್ರಕರಣಗಳ ಆರೋಪಿಯನ್ನು ಪತ್ತೆ ಹೆಚ್ಚಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೈಕಂಬ ಪೊಳಲಿ ದ್ವಾರದ ಬಳಿ ಹೋಟೆಲ್ ಸಹಿತ ಸುಮಾರು ಅಂಗಡಿಗಳಿಗೆ ನುಗ್ಗಿ ಸಾವಿರಾರು ರೂ.ನಗದು ಕಳವು ಮಾಡಿದ ಆರೋಪಿಯನ್ನು ಬಿ.ಸಿ.ರೋಡಿನ ಸರಣಿ ಅಂಗಡಿ ಕಳವಿನ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ ಅಂಗಡಿಯಿಂದ ವೃದ್ದೆಯೋರ್ವರ ಕುತ್ತಿಗೆಯಿಂದ ಸರ್ ಕಸಿದು ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಯಶಸ್ವಿಯಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂಲಕ ಕಳ್ಳರ ಬಂಧನ ಕಾರ್ಯದಲ್ಲಿ ಅವಿರತ ಶ್ರಮ ವಹಿಸಿದ್ದಾರೆ.