ಡೈಲಿ ವಾರ್ತೆ: 28/Jan/2024

ಹರಪನಹಳ್ಳಿ ತಾ.ಪಂನಲ್ಲಿ ಪ್ರಗತಿ ಪರಿಶೀಲನಾ ಸಭೆ: ಸ್ಥಳ ಭೇಟಿಗೆಂದು ಗೈರಾದರೆ ಸಸ್ಪೆಂಡ್ ಗ್ಯಾರಂಟಿ – ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಎಚ್ಚರಿಕೆ

ಹರಪನಹಳ್ಳಿ: (ವಿಜಯನಗರ ಜಿಲ್ಲೆ ):- ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಫೀಲ್ಡ್ ವಿಜಿಟ್ ನೆಪವೊಡ್ಡಿ ಪಂಚಾಯಿತಿಗಳಿಗೆ ಹೋಗದೆ ಗೈರಾದರೆ ಸಸ್ಪೆಂಡ್ ಮಾತ್ರ ಗ್ಯಾರಂಟಿ ಎಂದು ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಅವರು ಪಿಡಿಒಗಳಿಗೆ ಎಚ್ಚರಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಅವರಿಂದ ಹಿಡಿದು ಡಿ-ಗ್ರೂಪ್‌ನ ಜವಾನರ ತನಕ ಎಲ್ಲರೂ ಇ-ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ಬೆಳಗ್ಗೆ ಶೀಘ್ರವಾಗಿಯೂ ನೀವು ಕೆಲಸದ ಸ್ಥಳಗಳಿಗೆ ಹೋದರೂ ಕಚೇರಿಗೆ ಬಂದು ಇ-ಹಾಜರಾತಿ ಹಾಕಬೇಕು. ಇದರ ಆಧಾರದ ಮೇಲೆ ವೇತನ ನೀಡಲಾಗುತ್ತಿದೆ. ಪಿಡಿಒಗಳು ಕಾಮಗಾರಿ ಸೇರಿದಂತೆ ವಿವಿಧ ಕಾರಣಗಳಿಗೆ ಸ್ಥಳ ಭೇಟಿ ಎಂದು ನಾನಾ ಸಬೂಬು ನೀಡಿ ಪಂಚಾಯಿತಿಗಳಿಗೆ ಹೋಗದೆ ಗೈರಾದರೆ ಶಿಸ್ತು ಕ್ರಮ ಗ್ಯಾರಂಟಿ. ಉಳಿದ ಪಿಡಿಒಗಳಿಗೂ ಈ ಬಗ್ಗೆ ಪಾಠವೂ ಆಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಸಿದರು.

ಅಣಜಿಗೆರೆ, ಹಿರೇಮೇಗಳಗೆರೆ, ಮಾಡ್ಲಗೆರೆ, ಚಿಗಟೇರಿ, ಹಾರಕನಾಳು, ಕಡತಿ, ಪುಣಭಗಟ್ಟ, ಗುಂಡುಗತ್ತಿ, ದುಗ್ಗಾವತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇವೆ. ಕಾಮಗಾರಿಗಳು ಸಹ ಮಂದಗತಿಯಲ್ಲಿ ಸಾಗುತ್ತಿವೆ ಎಂದು ಪಿಡಿಒಗಳು ತಿಳಿಸಿದಾಗ ಎಇಇ ಕಿರಣ್ ಮಾತನಾಡಿ, ತಾಂತ್ರಿಕ ಸಮಸ್ಯೆ, ಒಎಚ್‌ಟಿ ನಿರ್ಮಿಸಲು ಸ್ಥಳೀಯರ ತಕರಾರು ಇವೆ. ಹೀಗಾಗಿ ಜೆಜೆಎಂ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ಶೀಘ್ರ ಮುಗಿಸಲು ಸಮಸ್ಯೆಯಾಗುತ್ತಿದೆ. ನಾವೂ ಕೂಡ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಆದಷ್ಟು ಬೇಗ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನೂ ಅಣಜಿಗೆರೆ ಗ್ರಾಪಂ ವ್ಯಾಪ್ತಿಯ ಮಾದಿಹಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದ್ದ ವೇಳೆ ಜೆಸಿಬಿ ಮೂಲಕ ನೆಲ ಅಗೆಯುವಾಗ ಸದ್ಯ ನೀರು ಪೂರೈಸುವ ಪೈಪ್ ಹೊಡೆದಿದೆ. ಈ ಬಗ್ಗೆ ಸೆಕ್ಷನ್ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ತಿಳಿಸಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಿಡಿಒ ಉಮೇಶ ಸಭೆಯಲ್ಲಿ ತಿಳಿಸಿದಾಗ ಗರಂ ಆದ ಸಿಇಒ ಅವರು ಸೆಕ್ಷನ್ ಅಧಿಕಾರಿಗಳು ನಿಮ್ಮ ಮಾತು ಕೇಳಿದಿದ್ದರೆ ಎಇಇ, ಇಒ ಅವರಿಗೂ ತಿಳಿಸಬೇಕು. ಇಷ್ಟು ದಿನ ಕಾಯುವುದರಲ್ಲಿ ಅರ್ಥವಿಲ್ಲ. ಇನ್ನೂ ಪೈಪ್‌ಗಳು ಹೊಡೆದಾಗ 24 ತಾಸಿನೊಳಗೆ ಅದನ್ನು ಸರಿಪಡಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ ಎಂದು ತಿಳಿಸಿದರು.

ಆದಷ್ಟು ಶೀಘ್ರ ಪ್ರಗತಿ ಸಾಧಿಸಬೇಕು: ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪಂಚಾಯತ್ ರಾಜ್ ಇಲಾಖೆಯ ನಾನಾ ವಿಷಯಗಳು, ಜಲ ಜೀವನ ಮಿಷನ್, ಸ್ವಚ್ಛ ಭಾರತ ಮಿಷನ್, ಯೋಜನಾ ಶಾಖೆ, ಲೆಕ್ಕ ಶಾಖೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಸ್ವಂತ ಬೋರ್‌ವೆಲ್ ಫೇಲಾದರೆ ಬಾಡಿಗೆಗೆ ಪಡೆಯಿರಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಬೋರ್‌ವೆಲ್‌ಗಳು ಫೇಲಾದರೆ ರೈತರ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಿರಿ. ಇವು ಸಿಗದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಆದರೆ, ಒಂದು ಟ್ಯಾಂಕರ್‌ಗೆ ಎಷ್ಟು ದರ ಇದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ದರ ನಿಗದಿಪಡಿಸಿ ಕೂಡಲೇ ನೀರು ಪೂರೈಸುವ ಕ್ರಮ ಆಗಬೇಕು ಎಂದು ಸಿಇಒ ಅವರು ಇಒಗೆ ಸೂಚಿದರು.

ಟ್ಯಾಪ್‌ಗಳು ಹೋದರೆ ನೀರಗಂಟಿಗಳು ಸರಿಪಡಿಸಬೇಕು
ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ನೋಡಿದಂತೆ ಕೆಲ ನಲ್ಲಿಗಳಿಗೆ ಟ್ಯಾಪ್‌ಗಳೇ ಇರುವುದಿಲ್ಲ. ಇನ್ನು ಪಬ್ಲಿಕ್ ನಲ್ಲಿಗಳು, ಪೈಪ್‌ಗಳಿಗೆ ಕುರಿ, ಮೇಕೆ, ದನಗಳನ್ನು ಕಟ್ಟಿರುತ್ತಾರೆ. ಇದು ಸರಿಯಲ್ಲ. ಹೀಗಾಗಿ ಎಲ್ಲೇ ಟ್ಯಾಪ್ ಕಳಚಿದರೂ ಅದನ್ನ ಒಂದೆರಡು ಸಲ ನೀರಗಂಟಿಗಳೇ ಸರಿಪಡಿಸಬೇಕು. ಇದನ್ನು ಅವರೇ ನೋಡಿಕೊಳ್ಳಬೇಕು. ಒಂದು ವೇಳೆ ಸಂಬAಧಪಟ್ಟ ಮನೆಯವರು ಅರ್ಥ ಮಾಡಿಕೊಳ್ಳದಿದ್ದರೆ ಕೇಸ್ ಹಾಕಲಾಗುವುದು ಎಂದು ಪಿಡಿಒಗಳ ಮೂಲಕ ಎಚ್ಚರಿಸಿ. ಆದರೂ ಸರಿ ಹೋಗದಿದ್ದರೆ ಮುಂದಿನ ಕ್ರಮ ಜರುಗಿಸಿ ಎಂದು ಸಿಇಒ ಅವರು ತಿಳಿಸಿದರು.

ಹರಪನಹಳ್ಳಿ ಬಿಟ್ಟು ಬೇರೆಡೆ ವರ್ಗಾವಣೆ
ಏಳೆಂಟು ಜನ ಪಿಡಿಒಗಳು ದಾವಣಗೆರೆಯಿಂದ ಹೋಗಿ ಬಂದು ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸರಿಯಾದ ಸಮಯಕ್ಕೆ ಪಂಚಾಯಿತಿಗಳಿಗೆ ಹಾಜರಾಗದಿದ್ದರೆ ಸರ್ಕಾರಿ ಕೆಲಸಗಳು ಹಾಗೂ ಜನರ ಸೇವೆಗಳಿಗೂ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಪಂಚಾಯಿತಿ ಇರುವ ತಾಲೂಕಿನ ಕೇಂದ್ರ ಸ್ಥಾನ ಅಥವಾ ಪಂಚಾಯಿತಿಗಳ ಅಕ್ಕ-ಪಕ್ಕದ ಪಟ್ಟಣಗಳಲ್ಲಾದರೂ ವಾಸವಾಗಿರುವುದು ಕಡ್ಡಾಯ. ಇದನ್ನು ನಿರ್ಲಕ್ಷö್ಯ ಮಾಡಿ ಕಚೇರಿಗಳಿಗೆ ತಡವಾಗಿ ಬಂದರೆ ಸಸ್ಪೆಂಡ್ ಕಡ್ಡಾಯ. ನಂತರ ಮತ್ತೆ ಕೆಲಸಕ್ಕೆ ಬಂದಾಗ ಹರಪನಹಳ್ಳಿ ಬಿಟ್ಟು ಬೇರೆ ತಾಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಲಾಗುವುದು. ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿಗೆ ಕಳಿಸಲಾಗುವುದು ಎಂದು ಸಿಇಒ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ನರೇಗಾ ಸಹಾಯಕ ನಿರ್ದೇಶಕರಾದ ಯು.ಎಚ್.ಸೋಮಶೇಖರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ತಾಲೂಕು ಯೋಜನಾಧಿಕಾರಿ ನವೀನ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಕಿರಣ್, ತಾಪಂ ವ್ಯವಸ್ಥಾಪಕ ದಾದ ಖಲೀಲ್ ಸಾಬ್, ಎಲ್ಲ ಪಂಚಾಯಿತಿಗಳ ಪಿಡಿಒಗಳು, ನರೇಗಾ ಹಾಗೂ ತಾಪಂ ಸಿಬ್ಬಂದಿ ಇದ್ದರು.