ಡೈಲಿ ವಾರ್ತೆ: 07/Feb/2024

ವರದಿ: ಅದ್ದಿ ಬೊಳ್ಳೂರು

ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಟೈಕ್ವೋಂಡೊ ಕರಾಟೆ ತರಬೇತಿಗೆ ಚಾಲನೆ


ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್ (ರಿ.) ಬೊಳ್ಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಮ್ಯಾಕ್ಸ್ ಫಿಟ್ ನೆಸ್ ಸಹಯೋಗದೊಂದಿಗೆ ಟೈಕ್ವೊಂಡೋ ಕರಾಟೆ ತರಬೇತಿಯ ಉದ್ಘಾಟನಾ‌ ಸಮಾರಂಭವು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಬಾನುವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಿಲಯನ್ಸ್ ಎಸೋಸಿಯೇಶನ್ ಅಧ್ಯಕ್ಷ ‘ಕಲಂದರ್ ಕೌಶಿಕ್’ ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದು ಮಕ್ಕಳ ಮಾನಸಿಕ ಹಾಗೂ ಶಾರೀರಿಕ ವಿಕಸನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಆದ್ದರಿಂದ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಮಾಡಿ ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕಾಗಿರುವುದು ಪೋಷಕರ ಆದ್ಯ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಟೈಕಾಂಡೋ ಕರಾಟೆ ಕೇವಲ ಆತ್ಮ ರಕ್ಷಣಾ ಕಲೆಯಾಗಿರದೇ ಅವು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಬಲ ಅಸ್ತ್ರವೂ ಆಗಿದೆ, ಶಿಕ್ಷಣದ ಜೊತೆಗೆ‌ ಇಂತಹ ಕಲೆಗಳೂ ಮಕ್ಕಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿವೆ, ಈ ನಿಟ್ಟಿನಲ್ಲಿ ಪೋಷಕರು ಆಲೋಚನೆ ನಡೆಸಬೇಕಾಗಿದೆ ಎಂದು ಮ್ಯಾಕ್ಸ್ ಫಿಟ್ ನೆಸ್ ಸಂಸ್ಥೆಯ ತರಬೇತುದಾರ ಆಸಿಫ್ ಕಿನ್ಯಾ ಕ್ರೀಡೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ರಿಲಯನ್ಸ್ ಅಸೋಸಿಯೇಷನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಝೀಜ್ ಐ.ಎ.ಕೆ, ಮ್ಯಾಕ್ಸ್ ಫಿಟ್ ನೆಸ್ ಸಂಸ್ಥೆಯ ಸಹ ತರಬೇತುದಾರ ಸವದ್ ಕಿನ್ಯಾ, ಅಕ್ಬರ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದೇಶ ಯಾತ್ರೆ ಕೈಕೊಂಡಿರುವ ರಿಲಯನ್ಸ್ ಸಂಸ್ಥೆಯ ಮಾಜಿ ಪದಾಧಿಕಾರಿಗಳಾದ ಸಿದ್ದಿಕ್ ಬೊಳ್ಳೂರು ಮತ್ತು ಫಾರೂಕ್ ನವರಂಗ್ ಇವರಿಗೆ ವೇದಿಕೆಯಲ್ಲಿ ಶಾಲು ಹೊದಿಸಿ ಗೌರವ ಸನ್ಮಾನ ನೀಡಿ ಬೀಳ್ಕೊಡಲಾಯಿತು.

ಆರಿಶ್ ನವರಂಗ್ ಕಾರ್ಯಕ್ರಮ ನಿರೂಪಿಸಿ ಕಾರ್ಯದಶಿಯಾದ ರಿಯಾಜ್ ಅಲ್ ಅಕ್ಷ ವಂದಿಸಿದರು.