ಡೈಲಿ ವಾರ್ತೆ: 15/Feb/2024
ಕ್ರಿಶ್ಚಿಯನ್ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ಕ್ರೈಸ್ತ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ: ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಇಲ್ಲಿನ ವೆಲೆನ್ಸಿಯಾ ಸೇಂಟ್ ಜೆರೋಸಾ ಪ್ರೌಢಶಾಲೆ ಮುಂದೆ ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ್ದಲ್ಲದೇ, ಕ್ರೈಸ್ತ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಜಿ ಶಾಸಕ ಐವಾನ್ ಡಿಸೋಜಾ ನೇತೃತ್ವದ ಕಾಂಗ್ರೆಸ್ ನಿಯೋಗವು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಮಂಗಳೂರು ನಗರದ ವೆಲೆನ್ಸಿಯಾ ಸೇಂಟ್ ಜೆರೋಸಾ ಪ್ರೌಢಶಾಲೆ ಶಿಕ್ಷಕಿ ಸಿಸ್ಟರ್ ಪ್ರಭಾ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವೇಳೆ ಹಿಂದೂ ದೇವರನ್ನು ಅವಮಾನ ಮಾಡಿರುತ್ತಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಆದ್ರೆ ಪ್ರಭಾ ಅವರು ಯಾವುದೇ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಜೊತೆ ವಿಮರ್ಷೆ ಮಾಡದೇ ಶಾಸಕ ವೇದವ್ಯಾಸ ಕಾಮತ್ ಇದೇ ಫೆಬ್ರವರಿ 12 ರಂದು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್, ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಸಂದೀಪ್ ಗರೋಧಿ, ಬಿಜೆಪಿ ಸದಸ್ಯ ಭರತ್ ಕುಮಾರ್ ಶಾಲೆ ಮುಂದೆ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ. ಶಾಲಾ ಗೇಟ್ ಮುಂಭಾಗದಲ್ಲಿ ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಕ್ರಿಶ್ಚಿಯನ್ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಜೊತೆಗೆ ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದನೆ ನೀಡಿದ್ದಾರೆ. ಅಲ್ಲದೇ ಶಾಲಾ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ್ದು, ಹಿಂದೂ-ಕ್ರೈಸ್ತ ಧರ್ಮದ ನಡುವೆ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವಂತೆ ಮಾತನಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗವು ದೂರಿನಲ್ಲಿ ಉಲ್ಲೇಖಿಸಿದೆ.