
ಡೈಲಿ ವಾರ್ತೆ:ಜನವರಿ/29/2026
ಜ.30 ರಂದು ಬ್ರಹ್ಮಾವರದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ: ಜಾಗೃತಿ ಮೆರವಣಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಸಂದೇಶ

ಬ್ರಹ್ಮಾವರ: 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ – 2026ರ ಅಂಗವಾಗಿ ದಿನಾಂಕ 30 ಜನವರಿ 2026ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಬ್ರಹ್ಮಾವರದ ಕುಂಜಾಲು ಕ್ರಾಸ್ (ಚಾಂತಾರು)ನಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರೋಟರಿ ಕ್ಲಬ್ ಬ್ರಹ್ಮಾವರ, ರೋಟರ್ಯಾಕ್ಟ್ ಕ್ಲಬ್ ಬ್ರಹ್ಮಾವರ, ಲಯನ್ಸ್ ಕ್ಲಬ್, ರೆಡ್ ಕ್ರಾಸ್ ಸೊಸೈಟಿ, ಹಿರಿಯ ನಾಗರಿಕರ ವೇದಿಕೆ, ವಿವಿಧ ಚಾಲಕರ ಹಾಗೂ ಮಾಲಕರ ಸಂಘಗಳು, ಗ್ರಾಮ ಪಂಚಾಯತ್‌ಗಳು, ಶಿಕ್ಷಣ ಸಂಸ್ಥೆಗಳು, ಪತ್ರಕರ್ತರ ಸಂಘ ಹಾಗೂ ಹಲವು ಸಂಘ – ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಭಾಗವಾಗಿ ಬೆಳಿಗ್ಗೆ 9.00 ಗಂಟೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ (ಬೋರ್ಡ್ ಹೈಸ್ಕೂಲ್), ಬ್ರಹ್ಮಾವರದಿಂದ ರಸ್ತೆ ಸುರಕ್ಷತಾ ಜಾಗೃತಿ ಮೆರವಣಿಗೆ ಹೊರಟು ಬ್ರಹ್ಮಾವರ ಬಸ್ ನಿಲ್ದಾಣದ ಸಮೀಪದ ಕುಂಜಾಲು ಕ್ರಾಸ್ವರೆಗೆ ಸಾಗಲಿದೆ. ನಂತರ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಕುರಿತ ಮಾಹಿತಿ, ಜಾಗೃತಿ ಸಂದೇಶಗಳು ಹಾಗೂ ಅರಿವು ಕಾರ್ಯಕ್ರಮಗಳು ನಡೆಯಲಿವೆ.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.