
ಡೈಲಿ ವಾರ್ತೆ:ಜನವರಿ/29/2026
ಮಣಿಪಾಲದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಐದು ಮಂದಿ ವಶಕ್ಕೆ

ಮಣಿಪಾಲ, ಜ.29: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಮಾಂಡವಿ ಪ್ಯಾಲೇಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಐದು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಅವರು ದಿನಾಂಕ 28/01/2026 ರಂದು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಮದ್ಯಪಾನ ಕುರಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದರು.
ಪರಿಶೀಲನೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿರುವುದು ಖಚಿತವಾಗಿದ್ದು, ಪಂಚರ ಸಮ್ಮುಖದಲ್ಲಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆಯಲಾದವರಿಂದ ಮದ್ಯದ ಬಾಟಲಿ, ಖಾಲಿ ಬಾಟಲಿ, ಟಿನ್ ಬಾಟಲಿ, ಖಾಲಿ ಪ್ಲಾಸ್ಟಿಕ್ ಗ್ಲಾಸ್ ಸೇರಿದಂತೆ ಸ್ವತ್ತುಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2026 ಅಡಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಕಲಂ 15(ಎ)ರಂತೆ ಪ್ರಕರಣ ದಾಖಲಾಗಿದೆ.