ಡೈಲಿ ವಾರ್ತೆ:ಜನವರಿ/29/2026

ಮದ್ಯಪಾನ ಮಾಡಿ ಸರಣಿ ಅಪಘಾತ: ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ FIR – ನಾಲ್ಕು ಕಾರುಗಳಿಗೆ ಹಾನಿ

ಬೆಂಗಳೂರು, ಜ.29: ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸರಣಿ ಅಪಘಾತ ಎಸಗಿದ ಆರೋಪದಡಿ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬುಧವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರು, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಟ್ಟು ನಾಲ್ಕು ಕಾರುಗಳು ಜಖಂಗೊಂಡಿದ್ದು, ಅದರಲ್ಲಿ ಒಂದು ಕ್ಯಾಬ್ ಕೂಡ ಸೇರಿದೆ. ಅಪಘಾತದ ವೇಳೆ ಕ್ಯಾಬ್‌ನಲ್ಲಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.

ಕಣ್ಣೀರಿಟ್ಟ ಕ್ಯಾಬ್ ಚಾಲಕ:
ಅಪಘಾತಕ್ಕೀಡಾದ ಕ್ಯಾಬ್ ಚಾಲಕ ಶ್ರೀನಿವಾಸ್ ಪ್ರತಿಕ್ರಿಯಿಸಿ,
“ಸಿಗ್ನಲ್‌ನಲ್ಲಿ ನಿಂತಿದ್ದ ನಮ್ಮ ಕಾರಿಗೆ ನಟ ಮಯೂರ್ ಪಟೇಲ್ ಅವರ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿತು. ಅವರೇ ಕಾರು ಚಾಲನೆ ಮಾಡುತ್ತಿದ್ದರು. ಮೊದಲು ನನ್ನ ಕಾರಿಗೆ ಡಿಕ್ಕಿ ಹೊಡೆದು, ನಂತರ ಇನ್ನಿತರ ವಾಹನಗಳಿಗೆ ತಾಗಿತು. ಒಟ್ಟು ನಾಲ್ಕು ಕಾರುಗಳಿಗೆ ಹಾನಿಯಾಗಿದೆ. ಅವರು ಬೆಳಗ್ಗೆ ಸರಿ ಮಾಡಿಕೊಡುತ್ತೇನೆ ಎಂದರು. ಆದರೆ ನಾವು ಈಗಲೇ ಸೆಟಲ್‌ಮೆಂಟ್ ಬೇಕು ಎಂದಾಗ, ಕೊನೆಗೆ ನಾನು ಸಿನಿಮಾ ನಟ ಮಯೂರ್ ಪಟೇಲ್ ಎಂದು ಪರಿಚಯಿಸಿಕೊಂಡರು” ಎಂದು ಕಣ್ಣೀರಿಟ್ಟಿದ್ದಾರೆ.

ಪತ್ನಿಯ ಒಡವೆ ಅಡವಿಟ್ಟು ಕಾರು ಖರೀದಿ:
“ನಾನು ಕಾರು ಖರೀದಿಸಿ ಕೇವಲ 15 ದಿನಗಳಾಗಿವೆ. ಪತ್ನಿಯ ಒಡವೆಯನ್ನು ಅಡವಿಟ್ಟು ಈ ಕಾರು ತೆಗೆದುಕೊಂಡಿದ್ದೇನೆ. ಈಗ ಕಾರು ಸಂಪೂರ್ಣ ಜಖಂ ಆಗಿದೆ” ಎಂದು ಶ್ರೀನಿವಾಸ್ ನೋವಿನಿಂದ ಹೇಳಿದ್ದಾರೆ.

ಮಯೂರ್ ಪಟೇಲ್ ನೀಡಿದ ಸ್ಪಷ್ಟನೆ:
ಅಪಘಾತದ ಬಗ್ಗೆ ಮಾತನಾಡಿದ ಮಯೂರ್ ಪಟೇಲ್,
“ನನ್ನ ಕಾರಿಗೆ ಬ್ರೇಕ್ ಫೇಲ್ಯೂರ್ ಆಗಿತ್ತು. ಟ್ರಿನಿಟಿ ಸರ್ಕಲ್ ಕಡೆಯಿಂದ ದೊಮ್ಮಲೂರು ಕಡೆಗೆ ಹೋಗುತ್ತಿದ್ದೆ. ಬ್ರೇಕ್ ಒತ್ತಿದರೂ ಕಾರು ನಿಲ್ಲಲಿಲ್ಲ. ಹ್ಯಾಂಡ್ ಬ್ರೇಕ್ ಪ್ರಯತ್ನಿಸಿದ್ದೇನೆ. ನನ್ನ ಕಾರಿಗೆ ಇನ್ಶುರೆನ್ಸ್ ಇದೆ” ಎಂದು ತಿಳಿಸಿದ್ದಾರೆ.

ಪೊಲೀಸ್ ತನಿಖೆ:
ಸ್ಥಳಕ್ಕೆ ಧಾವಿಸಿದ ಪೊಲೀಸರು ಮಯೂರ್ ಪಟೇಲ್ ಅವರನ್ನು ಠಾಣೆಗೆ ಕರೆದೊಯ್ದು ತಪಾಸಣೆ ನಡೆಸಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ದೃಢಪಟ್ಟಿದೆ. ಕ್ಯಾಬ್ ಚಾಲಕ ಶ್ರೀನಿವಾಸ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಮಯೂರ್ ಪಟೇಲ್ ಅವರ ಕಾರನ್ನು ಸೀಜ್ ಮಾಡಿದ್ದು, ಕಾರಿಗೆ ಇನ್ಶುರೆನ್ಸ್ ಇಲ್ಲದಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
ದಾಖಲಾದ ಸೆಕ್ಷನ್‌ಗಳು:
ಬಿಎನ್‌ಎಸ್ 285: ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಅಪಾಯ ತಂದೊಡ್ಡುವುದು
ಐಎಂವಿ 185: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು
ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.