ಡೈಲಿ ವಾರ್ತೆ: 20/Mar/2024
ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ: ಉಡುಪಿ ಮೂಲದ ಕುಟುಂಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು!
ಬೆಂಗಳೂರು: ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು.
ಮೃತಪಟ್ಟ ಮಹಿಳೆ ಸುಕನ್ಯ (58). ನಿಖಿತ್, ನಿಶ್ಚಿತ ಮೃತ ಪಟ್ಟಿರುವ ಅವಳಿ ಮಕ್ಕಳು.
ಇವರು ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು. ನಿನ್ನೆ ಸಂಜೆ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಬಂದು ಸಾಲದ ಹಣ ವಾಪಸು ಕೇಳಿದ್ದರು ಎಂದು ತಿಳಿದು ಬಂದಿದೆ. ಬ್ಯಾಂಕ್ ಸಿಬ್ಬಂದಿಯ ಬೆದರಿಕೆಗೆ ಹೆದರಿ ಬೆಳಗ್ಗೆ ಗಂಡನಿಗೆ ಹಾಲು ಹಾಗೂ ಪೇಪರ್ ನೀಡಿ ರೂಂ ಲಾಕ್ ಮಾಡಿ ಬೆಂಕಿ ಹಚ್ಚಿಕೊಂಡು ತಾಯಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಕನ್ಯಾ ಪತಿ ಜಯಾನಂದ್ ಫ್ಯಾಕ್ಟರಿ ನಡೆಸುತ್ತಿದ್ದರು. ಕೋವಿಡ್‌ನಿಂದ ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಜಯಾನಂದ್ ಫ್ಯಾಕ್ಟರಿ ಬಂದ್ ಮಾಡಿದ್ದರು. ಜಯಾನಂದ್ ಸಾಕಷ್ಟು ಸಾಲ ಮಾಡಿದ್ದರಿಂದ ಸುಕನ್ಯಾ ಮನೆಯಲ್ಲಿ ಟ್ಯೂಷನ್ ಹೇಳಿಕೊಡುತ್ತಿದ್ದರು
ವ್ಯವಹಾರ ನಷ್ಟವಾಗಿದ್ದರಿಂದ ಜಯಾನಂದ್ ಆನಾರೋಗ್ಯ ಪೀಡಿತರಾಗಿ ಮನೆಯಲ್ಲಿದ್ದರು. ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಮನೆಯಿಂದಲೇ ವರ್ಕ್ ಪ್ರಮ್ ಹೋಂ ಮಾಡುತ್ತಿದ್ದ.
ನಿಕಿತ್ ಕಳೆದ ನಾಲೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ. ಸಾಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಮನೆಗೆ ಸಾಲಗಾರರು ಬರುತ್ತಿದ್ದರು. ಹದಿನೈದು ವರ್ಷಗಳಿಂದ ಒಂದೇ ಮನೆಯಲ್ಲಿ ಕುಟುಂಬ ಬಾಡಿಗೆಗೆ ಇತ್ತು. ಕಳೆದ ಕೆಲ ತಿಂಗಳಿನಿಂದ ಬಾಡಿಗೆ ಕಟ್ಟಲು ಕುಟುಂಬ ಒದ್ದಾಡುತ್ತಿತ್ತು. ಮಂಗಳವಾರ ಸಾಲಗಾರರು ಮನೆ ಬಂದು ಸಾಲ ಪಾವತಿಸುವಂತೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದೆ.
ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.