ಡೈಲಿ ವಾರ್ತೆ: 28/Mar/2024

ಬೈಕಂಪಾಡಿ ಸೀ ಫುಡ್ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ: ಕೋಟ್ಯಾಂತರ ರೂ. ನಷ್ಟ!

ಮಂಗಳೂರು : ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಭಾರಿ ಅಗ್ನಿ ಅನಾಹುತ ಸಂಭವಿಸಿದೆ.

ಕೋಳಿ ಆಹಾರಕ್ಕೆ ಬೇಕಾಗಿರುವ ಮೀನು ಪದಾರ್ಥಗಳನ್ನು ಉತ್ಪಾದಿಸುವ ಶಿಹಾರ ಎಂಟರ್ಪ್ರೈಸ್ ನಲ್ಲಿ‌ ಈ ಅಗ್ನಿ ದುರಂತ ಸಂಭವಿಸಿದೆ. ಅವಘಡದಿಂದ ಬೈಕಂಪಾಡಿಯಲ್ಲಿರುವ ಸೀ ಫುಡ್ ಫ್ಯಾಕ್ಟರಿ ಸಂಪೂರ್ಣ ಭಸ್ಮವಾಗಿದೆ.

ತಡ ರಾತ್ರಿ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಕಾರ್ಖಾನೆ ಇಡೀಯ ವ್ಯಾಪಿಸಿದ್ದು ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಶಾರ್ಟ್ ಸರ್ಕಿಟ್ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಸಿದೆ ಎಂದು ಮಾಲಿಕ ಮೊಹಮ್ಮದ್ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನ ತಪ್ಪಿಸಿದರು. ಬೆಂಕಿಯಿಂದ ಹಾನಿಗೊಳಗಾದ ಪ್ರಮಾಣವನ್ನು ಪ್ರಸ್ತುತ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.