ಡೈಲಿ ವಾರ್ತೆ: 05/April/2024
ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದ ಪುಟ್ಟ ಕಂದಮ್ಮ ಸಾತ್ವಿಕ್ ಕ್ಷೇಮ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್
ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದ 2 ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ ಕ್ಷೇಮವಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ.
ಈ ಸಂಬಂಧ ಜಿಲ್ಲಾಧಿಕಾರಿ ಭೂಬಾಲನ ಅವರು ಮಾಧ್ಯಮದವರ ಜೊತೆ ಮಾತನಾಡಿ, ಮಗು ಅರೋಗ್ಯವಾಗಿದ್ದಾನೆ. ಸಣ್ಣ-ಪುಟ್ಟ ಗಾಯ ಬಿಟ್ಟರೆ ಯಾವುದೇ ಗಾಯಗಳು ಇಲ್ಲ. ಘಟನೆ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಗು ಸಂದ್ಪಿಸಿದೆ.
ಮಗು ಚಟುವಟಿಕೆಯಿಂದ ಕೂಡಿದೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ನಾಳೆ ಒಂದು ದಿನ ನೋಡಿಕೊಂಡು ಮಗುವನ್ನ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ಸಾತ್ವಿಕ್‍ಗೆ ಮರು ನಾಮಕರಣ: ಮಗನ ಆರೋಗ್ಯದ ಕುರಿತು ತಂದೆ ಸತೀಶ್ ಜೊತೆ ಮಾತನಾಡಿ, ಮಗ ಸಂಪೂರ್ಣ ಆರೋಗ್ಯದಿಂದ ಇದ್ದಾನೆ. ನಿನ್ನೆ ಎಂಆರ್‍ಐ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ್ದಾರೆ. ಎಲ್ಲವೂ ಸಾಮಾನ್ಯವಾಗಿದೆ ಅಂತಾ ವೈದ್ಯರು ಹೇಳಿದ್ದಾರೆ. ನಮ್ಮ ಮಗನನ್ನ ಉಳಿಸಿಕೊಟ್ಟ ಸಂಪೂರ್ಣ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದರು.
ಲಚ್ಯಾಣ ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗ ಮಹಾರಾಜರ ಕೃಪೆಯಿಂದಲೇ ನಮ್ಮ ಮಗ ಮರಳಿದ್ದಾನೆ. ಕಾರಣ ಸಿದ್ಧಲಿಂಗ ಮುತ್ಯಾನ ಹೆಸರನ್ನ ಸಾತ್ವಿಕ್ ಗೆ ಮರು ನಾಮಕರಣ ಮಾಡಲಿದ್ದೇವೆ. ಇದೇ ತಿಂಗಳ 28 ರಂದು ಸಿದ್ಧಲಿಂಗ ಮಹರಾಜರ ಜಾತ್ರಾ ಮಹೋತ್ಸವ ಇದೆ. ಆಗ ಸಾತ್ವಿಕ್ ಮರುನಾಮಕರಣ ಕಾರ್ಯ ಮಾಡಲಿದ್ದೇವೆ. ಸಮಸ್ತ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಸಾತ್ವಿಕ್ ತಪಾಸಣೆಗೆ ಬಂದ ಜಿಲ್ಲಾ ಸರ್ಜನ್ ಶಿವಾನಂದ ಮಾಸ್ತಿಹೊಳಿ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಾತ್ವಿಕ್‍ಗೆ ಚಿಕಿತ್ಸೆ ನಡೆಯುತ್ತಿದ್ದು, ನಿನ್ನೆಯಿಂದಲೆ ತಪಾಸಣೆ ಕಾರ್ಯ ನಡೆದಿದೆ. ಸಾತ್ವಿಕ್ ನನ್ನ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾನೆ. ಎರಡು ದಿನ ನಿಗಾದಲ್ಲಿ ಇಡಲಾಗಿದೆ. ಸದ್ಯ ವೈದ್ಯರ ತಂಡದಿಂದ ನಡೆಯುತ್ತಿರುವ ತಪಾಸಣೆ ಕಾರ್ಯ ನಡೆಸುತ್ತಿದೆ ಎಂದಿದ್ದಾರೆ.