ಡೈಲಿ ವಾರ್ತೆ: 06/April/2024
ವ್ಯಕ್ತಿಯೋರ್ವ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿ, ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ!
ಕಾರವಾರ: ವ್ಯಕ್ತಿಯೋರ್ವ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿ ಚಾಲಕ ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ನಡೆದಿದೆ.
ಶಿರವಾಡದ ಸುಭಾಷ್ ಬಾಡಕರ್ ಗೂಂಡಾ ವರ್ತನೆ ತೋರಿದ ವ್ಯಕ್ತಿ.
ಬಸ್ ಕಾರವಾರದಿಂದ ಸಿದ್ದರಗೆ ತೆರಳುತ್ತಿತ್ತು. ಈ ವೇಳೆ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಬಳಿ ಬಸ್ ಮುಂದೆ ಬೈಕ್ ನಿಲ್ಲಿಸಿದ್ದಾನೆ. ದಾರಿ ಬಿಡುವಂತೆ ಪ್ರಯಾಣಿಕ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ವಿಚಾರಿಸಲು ಹೋದ ಚಾಲಕ, ನಿರ್ವಾಹಕನ ಶರ್ಟ್ ಹಿಡಿದು ಅವರ ಮೇಲೂ ಹಲ್ಲೆ ಮಾಡಿದ್ದಾನೆ.
ಹಲ್ಲೆಯಲ್ಲಿ ಸಾರಿಗೆ ಬಸ್ ಚಾಲಕ ಮಹಮ್ಮದ್ ಇಸಾಕ್ (28) ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಬಸ್ ಚಾಲಕನನ್ನು 108 ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.