ಡೈಲಿ ವಾರ್ತೆ: 23/April/2024

ಮುರುಘಾ ಶ್ರೀ ಮತ್ತೆ ಜೈಲಿಗೆ: ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ

ಚಿತ್ರದುರ್ಗ: ಫೋಕ್ಸೋ  ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಅವರ ಜಾಮೀನು ರದ್ದುಗೊಳಿಸಿ, ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ಕೂಡ ನೀಡಿದೆ. ಜೊತೆಗೆ ವಿಶೇಷ ಕೋರ್ಟ್ನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆಗೆ ‘ಸುಪ್ರೀಂ’ ಆದೇಶಿಸಿದೆ. ಇನ್ನು 4 ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಬಂಧನದ ಅವಧಿಯನ್ನು ಇನ್ನೆರಡು ತಿಂಗಳ ಕಾಲ ವಿಸ್ತರಣೆ ಮಾಡಬಹುದು.

ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಎಸ್ಜೆಎಂ ವಿದ್ಯಾಪೀಠದಲ್ಲಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಸಂಬಂಧ ಮುರುಘಾ ಮಠದ ಪೀಠಾಧ್ಯಕ್ಷ ಮುರುಘಾ ಶ್ರೀಯನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಮುರುಘಾ ಶ್ರೀಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಹಾಗೇ ಜಾಮೀನಿನ ಮೇಲೆ ಹೊರ ಬಂದ ಅವರು, ಮುರುಘಾ ಶ್ರೀ ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳುತ್ತಿದ್ದರು.

ಬಳಿಕ ಇದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುರುಘಾ ಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿತ್ತು. ಅಲ್ಲದೆ, ಮುರುಘಾಮಠ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತಕ್ಕೆ ಮೂರು ದಿನದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಹಿರಿಯ ನ್ಯಾಯವಾದಿಗಳ ಜೊತೆ ಸ್ವಾಮೀಜಿ ಮಾತು‌ಕತೆ: ಸುಪ್ರೀಂ ಕೋರ್ಟ್ನಿಂದ ಮುರಘಾ ಶರಣರಿಗೆ ಜಾಮೀನು ರದ್ದಾಗುತ್ತಿದ್ದಂತೆ ಶಿವಯೋಗಿ ಮಂದಿರಕ್ಕೆ ಹಿರಿಯ ನ್ಯಾಯವಾದಿಗಳನ್ನ ಕರೆಯಿಸಿಕೊಂಡು ಸ್ವಾಮೀಜಿ ಮಾತು‌ಕತೆ ನಡೆಸುತ್ತಿದ್ದಾರೆ. ಕಳೆದ ಕೆಲ ತಿಂಗಳಿನಿಂದ ದಾವಣಗೆರೆ ನಗರದ ಜಯದೇವ ವೃತ್ತದ ಬಳಿ ಇರುವ ವಿರಕ್ತ ಮಠಕ್ಕೆ ಸೇರಿದ ಶಿವಯೋಗಿ ಮಂದಿರದಲ್ಲಿ ಇದ್ದಾರೆ.  ಸುಪ್ರೀಂ ನಿರ್ಧಾರ ಪ್ರಕಟವಾಗುತ್ತಿದ್ದಂತೆ ನ್ಯಾಯವಾದಿಗಳ ಜೊತೆ ಮಾತುಕತೆಗೆ ಮುಂದಾಗಿದ್ದಾರೆ.