ಡೈಲಿ ವಾರ್ತೆ: 25/April/2024

ಉಡುಪಿ-ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ: ರಾಜ್ಯ ಸಮೀಕ್ಷಾ ವರದಿ!

ರಾಜ್ಯದಲ್ಲಿ ಕನ್ನಡ ಮೀಡಿಯಾ ಡಾಟ್ ಕಾಮ್ ರಾಜ್ಯಾದ್ಯಂತ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸಿದ ಆನ್‌ಲೈನ್ ಸಮೀಕ್ಷೆಯ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಹುಮತ ಪಡೆಯಲಿದೆ ಎಂದು ತಿಳಿದು ಬಂದಿದೆ.

ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗಿಂತ ಕನಿಷ್ಠ 1ರಿಂದ 2 ಲಕ್ಷಗಳಷ್ಟು ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು ಕನಿಷ್ಠ 75 ರಿಂದ 80 ಸಾವಿರ ಮತಗಳಷ್ಟು ಹೆಚ್ಚು ಮತಗಳನ್ನು ಪಡೆಯಲಿದೆ ಹಾಗೂ ಉ.ಕ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 50ರಿಂದ 60ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಮಬಲದ ಹೋರಾಟ ಇದೆಯಾದರೂ ಬೇರೆ ಬೇರೆ ಕಾರಣಗಳಿಂದ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಕನಿಷ್ಠ 25ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಜಯಗಳಿಸಲಿದೆ.

ಸಮೀಕ್ಷೆಯಲ್ಲಿ ಮತದಾರರು ಹಲವು ಆಯಾಮಗಳಲ್ಲಿ, ಹಲವು ಉದಾಹರಣೆಗಳ ಸಮೇತವಾಗಿ ಉತ್ತರಿಸಿದ್ದಾರೆ. ಶೇಕಡಾ 64ರಷ್ಟು ಮಹಿಳೆಯರು ಮತ್ತು ಶೇಕಡಾ 59ರಷ್ಟು ಪುರುಷರು “ಕಾಂಗ್ರೆಸ್ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಭರವಸೆ ನೀಡಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆ ಮುಂತಾದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಮ್ಮ ಕುಟುಂಬದ ಆರ್ಥಿಕ ಸಮಸ್ಯೆಯನ್ನು ಕಡಿಮೆಗೊಳಿಸಿದೆ. ಆ ಮೂಲಕ ಕಾಂಗ್ರೆಸ್ ಕುರಿತು ನುಡಿದಂತೆ ನಡೆವ ಪಕ್ಷ ಎಂಬ ಭರವಸೆಯನ್ನು ನಮ್ಮಲ್ಲಿ ಮೂಡಿಸಿದೆ. ಆ ಕಾರಣಕ್ಕಾಗಿ ನಾವು ಕಾಂಗ್ರೆಸ್ ಗೆ ಓಟು ನೀಡಲಿದ್ದೇವೆ” ಎಂದು ಹೇಳಿದ್ದಾರೆ.

ಹಾಗೆಯೇ, ಅದರಲ್ಲಿ ಶೇಕಡಾ 63ರಷ್ಟು ಪುರುಷರು ಹಾಗೂ 58ರಷ್ಟು ಮಹಿಳೆಯರು “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಗಲಾಟೆ ಸಂಪೂರ್ಣವಾಗಿ ನಿಂತಿದೆ. ರಾಜ್ಯದ ಈ ಹಿಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ನಾವು ದುಬಾರಿ ಫೀಸು ಕೊಟ್ಟು ಶಾಲೆ ಕಾಲೇಜುಗಳಿಗೆ ವಿಧ್ಯಾಭ್ಯಾಸಕ್ಕೆಂದು ಸೇರ್ಪಡೆಗೊಳಿಸಿದ್ದ ನಮ್ಮ ಮನೆಮಕ್ಕಳ ಹೆಗಲ ಮೇಲೆ ಸ್ವತಃ ಬಿಜೆಪಿಗರೇ ಕೇಸರಿ ಶಾಲು ಹೊದೆಸಿ, ಘೋಷಣೆ ಕೂಗುವಂತೆ ಒತ್ತಾಯಿಸುವ ಮೂಲಕ ಗಲಾಟೆಗೆ ಪ್ರಚೋದನೆ ನೀಡುತ್ತಿದ್ದರು. ಆ ಮೂಲಕ ಅವರು ನಮ್ಮ‌ ಮನೆಯ ನೆಮ್ಮದಿಯನ್ನು ಕೆಡಿಸಿದ್ದರು. ಹಲಾಲ್, ಅಝಾನ್, ಉರಿಗೌಡ- ನಂಜೇಗೌಡ ಎಂದು ವದಂತಿ ಹರಡುವ ಮೂಲಕ ನಮ್ಮ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರಚೋದನೆ ನೀಡುತ್ತಿದ್ದರು. ಆದ ಕಾರಣಕ್ಕಾಗಿ ನಮ್ಮ ವಿಧ್ಯಾರ್ಥಿಗಳು ಕಡಿಮೆ ಅಂಕ ಪಡೆಯುವಂತಾಯಿತು. ಪ್ರತಿ ವರ್ಷ ರಾಜ್ಯದಲ್ಲಿ ಎರಡು ಮೂರನೆಯ ಸ್ಥಾನ ಪಡೆಯುತ್ತಿದ್ದ ಕರಾವಳಿ ಜಿಲ್ಲೆಗಳು ಆಗ 19ನೇಯ ಸ್ಥಾನ ಪಡೆಯುವಂತಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಂಡಿರುವ ಕಾರಣಕ್ಕಾಗಿ ಯಾವುದೇ ಕೋಮುವಿಭಜಕ ಶಕ್ತಿಗಳು ತಲೆ ಎತ್ತುತ್ತಿಲ್ಲ. ಆ ಕಾರಣಕ್ಕಾಗಿ ಶಾಲೆ ಕಾಲೇಜುಗಳಿಗೆ ಹೋಗುವ ನಮ್ಮ ಮನೆಗಳ ವಿದ್ಯಾರ್ಥಿಗಳು ಇದೀಗ ಸಂಪೂರ್ಣವಾಗಿ ವಿದ್ಯಾಭ್ಯಾಸದತ್ತ ಗಮನ ಕೊಡಲು ಅವಕಾಶ ಒದಗಿದೆ‌. ಈ ವರ್ಷ ಮೊದಲಿನಂತೆ ರ‌್ಯಾಂಕ್‌ನಲ್ಲಿ ಎರಡು ಮೂರನೆಯ ಸ್ಥಾನಕ್ಕೆ ಮತ್ತೆ ಏರಿದೆ. ಈ ನಿಟ್ಟಿನಲ್ಲಿ ನಮಗೆ ಭದ್ರತೆಯ ಭಾವನೆ ಮೂಡಿದೆ” ಎಂದು ಹೇಳಿದ್ದಾರೆ.

ಹಾಗೆಯೇ ಶೇಕಡಾ 60ರಷ್ಟು ಮಹಿಳೆಯರು ಮತ್ತು ಪುರುಷರು ಸಿದ್ದರಾಮಯ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆ ಇದೀಗ “ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲು ಉದ್ದೇಶಿಸಿರುವ ಪ್ರತಿ ಬಡಕುಟುಂಬದ ಓರ್ವ ಮಹಿಳೆಗೆ ಮಹಾಲಕ್ಷ್ಮಿ ಯೋಜನೆಯಡಿ ವರ್ಷ ಒಂದಕ್ಕೆ ನೀಡುವ 1ಲಕ್ಷ ರೂಪಾಯಿ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ವರ್ಷ ಒಂದಕ್ಕೆ ನೀಡುವ 1ಲಕ್ಷ ರೂಪಾಯಿ ನಿರುದ್ಯೋಗ ಭತ್ಯೆ. ಶಾಶ್ವತ ಆಯೋಗ ರಚಿಸುವ ಮೂಲಕ ಕೃಷಿ ಸಾಲಮನ್ನಾ. MGNREGA ಸೇರಿದಂತೆ ರಾಷ್ಟ್ರೀಯ ಕನಿಷ್ಠ ವೇತನವಾಗಿ ಕಾರ್ಮಿಕರಿಗೆ ದಿನಕ್ಕೆ 400 ರೂಪಾಯಿ ಕುರಿತು ಭರವಸೆಯ ಭಾವನೆ ಹೊಂದಿದ್ದಾರೆ” ಎಂಬ ಕುರಿತು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಶೇಕಡಾ 60ರಷ್ಟು ಪುರುಷ, ಮಹಿಳಾ ಮತದಾರರು ಕೇಂದ್ರದ ಬಿಜೆಪಿ ಸರಕಾರದ ಹತ್ತು ವರ್ಷಗಳ ಅವಧಿಯಲ್ಲಿ ಗ್ಯಾಸ್ ಬೆಲೆ ಮೂರುಪಟ್ಟು ಏರಿಕೆಯಾಗಿರುವುದು, ಪೆಟ್ರೋಲ್ ಡಿಸೇಲ್ ಬೆಲೆ ಒಂದೂವರೆ ಪಟ್ಟು ಹೆಚ್ಚಾಗಿರುವುದು, ಅದರ ಪರಿಣಾಮವಾಗಿ ಸಾಗಾಟ ವೆಚ್ಚ ಹೆಚ್ಚಾಗಿ ಆಹಾರ ಸಾಮಗ್ರಿಗಳ ಬೆಲೆ ದುಪ್ಪಟ್ಟು, ಮೂರು ಪಟ್ಟು ಹೆಚ್ಚಾಗಿರುವುದರ ಕುರಿತು ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಶೇಕಡಾ 46ರಷ್ಟು ಮಂದಿ “ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿರುವ ಈಗಿನ ಮಾರುಕಟ್ಟೆ ಬೆಲೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಸರಕಾರಿ ಆಸ್ತಿಗಳನ್ನು ಚಿಲ್ಲರೆ ಬೆಲೆಗೆ ಖಾಸಗಿ ಉದ್ಯಮಿಗಳಿಗೆ ಹಸ್ತಾಂತರ ಮಾಡಿದ ಕೇಂದ್ರದ ಬಿಜೆಪಿ ಸರ್ಕಾರದ ನಿರ್ಣಯಗಳನ್ನು ಖಂಡಿಸಿದ್ದಾರೆ. ಅದು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರ ಆಗಬೇಕಿರುವ ಸರಕಾರಿ ಆಸ್ತಿಯಾಗಿದೆ. ಅದನ್ನು ಖಾಸಗಿ ಉದ್ಯಮಿಗಳಿಗೆ ಹಸ್ತಾಂತರ ಮಾಡಿರುವ ಕಾರಣದಿಂದ ಮುಂದಿನ ಪೀಳಿಗೆ ಕಷ್ಟ ನಷ್ಟ ಅನುಭವಿಸಲಿದೆ” ಎಂದಿದ್ದಾರೆ.

ಶೇಕಡಾ 57ರಷ್ಟು ಮಂದಿ “ಕೇಂದ್ರದ ಬಿಜೆಪಿ ಸರಕಾರ ದೇಶದ ಬೆರಳೆಣಿಕೆಯಷ್ಟು ಉದ್ಯಮಿಗಳ 16ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಿರುವ ಕುರಿತು ಅಸಹನೆ ವ್ಯಕ್ತಪಡಿಸಿದ್ದಾರೆ. ದೇಶದ ಶ್ರಮಿಕರ, ರೈತರ, ಶೋಷಿತರ, ಮಹಿಳೆಯರ, ವಿಧ್ಯಾರ್ಥಿಗಳ ಕಲ್ಯಾಣಕ್ಕಾಗಿ ವಿನಿಯೋಗವಾಗಬೇಕಿದ್ದ ಅಷ್ಟೊಂದು ದೊಡ್ಡಮೊತ್ತವನ್ನು ಕೆಲವೇ ಕೆಲವು ಕೋಟ್ಯಾದಿಪತಿ ಉಧ್ಯಮಿಗಳ ಸಾಲಮನ್ನಾಕ್ಕೆ ವಿನಿಯೋಗಿಸಿರುವುದು ದೇಶದಲ್ಲಿ ಅಸಮಾನತೆ ಹೆಚ್ಚಲಿದೆ. ಇದು ಗುಲಾಮಗಿರಿ ಮತ್ತೆ ಆರಂಭಗೊಳ್ಳಲು ಕಾರಣವಾಗಲಿದೆ” ಎಂಬ ಆತಂಕ‌ ವ್ಯಕ್ತಪಡಿಸಿದ್ದಾರೆ.

ಶೇಕಡಾ 67 ರಷ್ಟು ಮಂದಿ ಪುರುಷರು, ಮಹಿಳೆಯರು “ದೇಶದ ಅವಘಡದ ಸಂಧರ್ಭಕ್ಕೆಂದು ಈ ಹಿಂದಿನ ಕಾಂಗ್ರೆಸ್ ಸರಕಾರಗಳು ಮೀಸಲಿಟ್ಟಿದ್ದ 1.76ಲಕ್ಷ ಕೋಟಿ ಆರ್ಬಿಐ ರಿಸರ್ವ್ ಫಂಡ್ ಅನ್ನು ಕೇಂದ್ರದ ಬಿಜೆಪಿ ಸರಕಾರ ತನ್ನ ವಶಕ್ಕೆ ಪಡೆದಿರುವುದನ್ನು ವಿರೋಧಿಸಿದ್ದಾರೆ. ಇದು ದೇಶದ ಆರ್ಥಿಕತೆಯ ಮೇಲೆ ದೀರ್ಘಕಾಲೀನ ಹೊಡೆತ ನೀಡಲಿದೆ. ಆ ಕಾರಣಕ್ಕಾಗಿ ಬಿಜೆಪಿಗೆ ಓಟು ನೀಡದಿರಲು ನಿರ್ಧರಿಸಿದ್ದೇವೆ” ಎಂದಿದ್ದಾರೆ.

ದೇಶದ ಹಲವು ಪ್ರತಿಷ್ಠಿತ ಪತ್ರಿಕೆಗಳು ನಡೆಸಿದ ಸಮೀಕ್ಷಾ ವರದಿಗಳು ಕೂಡ ಕಾಂಗ್ರೆಸ್ ನೇತೃತ್ವದ I.N.D.I.A ಒಕ್ಕೂಟ ಮೇಲುಗೈ ಸಾಧಿಸುತ್ತವೆ ಎಂದಿದೆ. ಹಿಂದಿ ಹೇರಿಕೆ, ಗುಜರಾತಿಗಳ ಮೇಲುಗೈ ಮುಂತಾದ ಕಾರಣಕ್ಕಾಗಿ ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಗೆಲ್ಲುವುದು ಕೂಡ ಪ್ರಯಾಸಕರವಾಗಲಿದೆ ಎಂದಿವೆ.