ಡೈಲಿ ವಾರ್ತೆ: 30/April/2024

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿ ಕಿಡಿಕಾರಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್

ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಈಗ ಬಿಜೆಪಿ ನಾಯಕರು ಮೌನ ವಾಗಿರುವುದು ಈಗ ಎಲ್ಲ ಕಡೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಈ ಪ್ರಕರಣದ ಸಂಬಂಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಈಗ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ.


ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ? ಎಂದು  ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ.
ಪ್ರಜ್ವಲ್‌ ರೇವಣ್ಣ ಒಬ್ಬ ಕಾಮುಕ. ಆತನಿಗೆ ಕಠಿಣ ಶಿಕ್ಷೆ ಆಗಲೇಬೇಕು. ಆತ ರಾಜ್ಯದ ಮರ್ಯಾದೆಯನ್ನು ಹರಾಜು ಹಾಕಿದ್ದಾನೆ’ ಎಂದು ಹರಿಹಾಯ್ದರು.

‘ಬೇಟಿ ಬಚಾವೊ ಬೇಟಿ ಪಢಾವೊ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಬಿಜೆಪಿಯ ಶೋಭಾ ಕರಂದ್ಲಾಜೆ, ಶ್ರುತಿ, ತಾರಾ ಅನೂರಾಧ ಸೇರಿದಂತೆ ಯಾರೂ ಧ್ವನಿ ಎತ್ತುತ್ತಿಲ್ಲ’ ಎಂದು ಆರೋಪಿಸಿದರು.

ಉಡುಪಿ ಹಾಸ್ಟೆಲ್‌ನಲ್ಲಿ ಕ್ಯಾಮೆರಾ ಇಟ್ಟ ಘಟನೆ ಬಗ್ಗೆ ಬಿಜೆಪಿಯವರು ರಾಜಕೀಯ ಮಾಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದವರು ಓಡೋಡಿ ಬಂದರು. ಈಗ ಹಲವು ಮಹಿಳೆಯರ ಮಾನ ಹರಾಜಾದರೂ ಯಾರೂ ಏನೂ ಮಾತಾಡುತ್ತಿಲ್ಲ. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ್ ಪೂಜಾರಿ ಏನೂ ಹೇಳುತ್ತಿಲ್ಲ ಯಾಕೆ ಎಂದು ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಎಚ್‌.ಡಿ.ರೇವಣ್ಣ, ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ತಪ್ಪು ಮಾಡಿದ್ದರಿಂದ ವಿದೇಶಕ್ಕೆ ಪರಾರಿಯಾಗಿದ್ದಾನೆ. ಅನ್ಯಾಯವಾಗಿರುವ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದರು.