

ಡೈಲಿವಾರ್ತೆ:14/ಮಾರ್ಚ್/2026


ಕೋಟ| ದಾರಿ ವಿವಾದದ ಕಿಚ್ಚು – 16 ಮಂದಿ ದಾಳಿ, ಕಂಪೌಂಡ್ ಗೋಡೆ ಧ್ವಂಸ, ಜೀವ ಬೆದರಿಕೆ ಆರೋಪ

ಕೋಟ: ದಾರಿಯ ವಿಚಾರವಾಗಿ ಉಂಟಾದ ಹಳೆಯ ವೈಷಮ್ಯ ಮತ್ತೊಮ್ಮೆ ತೀವ್ರಗೊಂಡು, ಅಕ್ರಮವಾಗಿ ಕೂಡಿ ಬಂದ ಗುಂಪೊಂದು ಜಾಗಕ್ಕೆ ನುಗ್ಗಿ ಕಂಪೌಂಡ್ ಗೋಡೆಯನ್ನು ಒಡೆದು ಲಕ್ಷಾಂತರ ರೂ. ನಷ್ಟ ಉಂಟುಮಾಡಿದ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಿರ್ಯಾದಿದಾರರಾದ ಪ್ರೇಮ ಪೂಜಾರ್ತಿ (64), ತಮ್ಮಯ್ಯ ಪೂಜಾರಿ ಅವರ ಪುತ್ರಿ, ಭಾಗೀರಥೀ ನಿಲಯ, ಮಕ್ಕಿಮನೆ ತೀರ್ಥಬೈಲು ನಿವಾಸಿ. ಇವರಿಗೆ ನೆರೆಮನೆಯ ರಾಧು ಪೂಜಾರ್ತಿ ಹಾಗೂ ಇತರರೊಂದಿಗೆ ದಾರಿಯ ವಿಚಾರವಾಗಿ ಹಲವು ದಿನಗಳಿಂದ ತಕರಾರು ನಡೆಯುತ್ತಿದ್ದು, ಇದರಿಂದಾಗಿ ತಮ್ಮ ಜಾಗಕ್ಕೆ ಕಂಪೌಂಡ್ ನಿರ್ಮಾಣ ಮಾಡಿದ್ದರೆಂದು ತಿಳಿದುಬಂದಿದೆ.
ಇದೀಗ ಮಾರ್ಚ್ 13ರಂದು ಬೆಳಿಗ್ಗೆ ಸುಮಾರು 8.40ರ ಸುಮಾರಿಗೆ ಆರೋಪಿತರಾದ ಗಿರಿಯಮ್ಮ, ರಾಧು, ವಸಂತಿ, ಅಶೋಕ್, ರಮೇಶ್, ಶೋಭಾ, ರತ್ನಾ, ಕೃಷ್ಣ, ನವೀನ, ಸುಶೀಲ, ಉದಯ, ಬೋಜು, ಮಹೇಶ್, ಶೀನ, ಗುಲಾಬಿ ಹಾಗೂ ಗಿರಿಜ ಸೇರಿ ಒಟ್ಟು 16 ಮಂದಿ ಅಕ್ರಮ ಕೂಟವಾಗಿ ಸ್ಕಂಗೋಲು ಮತ್ತು ಹಾರೆಗಳನ್ನು ಹಿಡಿದುಕೊಂಡು ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ “ಯಾಕೆ ಕಂಪೌಂಡ್ ಕಟ್ಟಿದ್ದೀರಿ” ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿದ್ದ ಕಂಪೌಂಡ್ ಗೋಡೆಯನ್ನು ಒಡೆದು ಹಾಕಿ ಸುಮಾರು 2.50 ಲಕ್ಷ ರೂ. ಮೌಲ್ಯದ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ, ಈ ಕೃತ್ಯದ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಪಿರ್ಯಾದಿದಾರರು ಹಾಗೂ ಅವರ ಪತಿಯನ್ನು ಕೊಂದು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2026 ರಡಿ ಬಿ.ಎನ್.ಎಸ್. ಕಲಂ 189(2), 191(2), 329(3), 352, 324(5), 351(2) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.