ಡೈಲಿ ವಾರ್ತೆ: 03/ಮೇ /2024

ಬ್ರಹ್ಮಾವರ: ವಾಸ್ತುತಜ್ಞನಿಂದ ಯುವಕನಿಗೆ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

ಬ್ರಹ್ಮಾವರ: ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ ಅನಂತ ನಾಯ್ಕ್(51) ಬಂಧಿತ ಆರೋಪಿ. ಈತ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದ ಲಾಡ್ಜ್ ವೊಂದರ ರೂಮಿನಲ್ಲಿ ಕಳೆದ 12ವರ್ಷಗಳಿಂದ ವಾಸ್ತುತಜ್ಞ, ಜಲತಜ್ಞ, ಯೋಗ ಪಂಡಿತ, ಆಧ್ಯಾತ್ಮಿಕ ಪಂಡಿತ ಎಂಬುದಾಗಿ ಬೋರ್ಡ್ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ.

ಏನಿದು ಪ್ರಕರಣ:
18ರ ಹರೆಯದ ಯುವಕ ತನ್ನ ತಂದೆಯೊಂದಿಗೆ ಈತನ ಬಳಿ ವಾಸ್ತು ಕೇಳಲು ಲಾಡ್ಜ್‌ನಲ್ಲಿರುವ ರೂಮಿಗೆ ರಾತ್ರಿ 9 ಗಂಟೆ ಸುಮಾರಿಗೆ ಹೋಗಿದ್ದನು. ಈ ಸಂದರ್ಭ ತಂದೆಯನ್ನು ಹೊರಗೆ ಕಳುಹಿಸಿದ ಅನಂತ ನಾಯ್ಕ್, ಬಳಿಕ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.
ತನಿಖೆ ನಡೆಸಿದ ಬ್ರಹ್ಮಾವರ ಪೊಲೀಸರು ನಾಯ್ಕ್‌ನನ್ನು ಬಂಧಿಸಿ ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.