ಡೈಲಿ ವಾರ್ತೆ: 22/ಮೇ /2024
ಡಿವೈಎಸ್ಪಿಗೆ ಆನ್‌ಲೈನ್ ವಂಚಕರಿಂದ ಟೋಪಿ: 15.98 ಲಕ್ಷ ಪಂಗನಾಮ
ಮಡಿಕೇರಿ: ಆನ್‌ಲೈನ್ ಖದೀಮರು ಡಿವೈಎಸ್ಪಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಅವರ ಅರಿವಿಗೆ ಬಾರದಂತೆ 15,98,761 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ.
ಈ ವಂಚನೆ ಪ್ರಕರಣ ಹಾಸನದಲ್ಲಿ ನಡೆದಿದ್ದು, ಕೊಡಗಿನ ಎರಡು ಪ್ರಮುಖ ಬ್ಯಾಂಕ್‌ಗಳಲ್ಲಿದ್ದ ಡಿವೈಎಸ್‌ಪಿ ಅವರ ಹಣವನ್ನು ಎಗರಿಸಲಾಗಿದೆ. ಹಾಸನ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಕೆ.ಮುರಳೀಧರ್ ಅವರೇ ಲಕ್ಷಾಂತರ ರೂ. ಗಳನ್ನು ಕಳೆದುಕೊಂಡು ಸ್ವತಃ ದೂರಿನೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಡಿವೈಎಸ್ಪಿ ಪಿ.ಕೆ.ಮುರಳೀಧರ್ ಅವರು ಮಡಿಕೇರಿಯ ಕೆನರಾ ಬ್ಯಾಂಕ್‌ನ ಮೈನ್ ಬ್ರ್ಯಾಂಚ್‌ನಲ್ಲಿ ಮತ್ತು ಭಾಗಮಂಡಲದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1:30ರ ಸಮಯದಲ್ಲಿ ಇವರ ಫೋನ್ಗೆ ಬಂದ ಮೆಸೇಜ್‌ಗಳನ್ನು ನೋಡಿ ಹೌಹಾರಿದ್ದಾರೆ. ಆ ಮೆಸೇಜ್‌ಗಳ ಮೂಲಕ ಖದೀಮರ ಕೈಚಳಕ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಅವರ ಗಮನಕ್ಕೆ ಬಾರದೆ ಈ ಎರಡೂ ಖಾತೆಗಳಿಂದ ಖತರ್ನಾಕ್ ಚೋರರ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.
ಕೆನರಾ ಬ್ಯಾಂಕ್ ಮಡಿಕೇರಿ ಮೈನ್ ಬ್ರ್ಯಾಂಚ್‌ನ ಖಾತೆಯಿಂದ ಬೆಳಗ್ಗೆ 10:29 ರಿಂದ ಮಧ್ಯಾಹ್ನ 1:30 ಗಂಟೆವರೆಗೆ 25 ವರ್ಗಾವಣೆಗಳ ಮೂಲಕ ಒಟ್ಟು 12,12,711 ರೂ. ಗಳಿಗೆ ಕನ್ನ ಹಾಕಲಾಗಿದೆ. ಭಾಗಮಂಡಲ ಕೆನರಾ ಬ್ಯಾಂಕ್ ಶಾಖೆ ಖಾತೆಯಿಂದ ಬೆಳಗ್ಗೆ 10:28 ರಿಂದ ಮಧ್ಯಾಹ್ನ 12.56 ಗಂಟೆವರೆಗೆ ಒಟ್ಟು 10 ವರ್ಗಾವಣೆ ಮೂಲಕ ಒಟ್ಟು 3,88,050 ರೂ. ಗಳನ್ನು ಮಂಗಮಾಯ ಮಾಡಲಾಗಿದೆ.
ಈ ಎರಡು ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು 15,98,761 ರೂ. ಗಳನ್ನು ವಂಚಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಾಸನದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಡಿವೈಎಸ್ಪಿ, ಆನ್‌ಲೈನ್ ಖದೀಮರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ.