ಡೈಲಿ ವಾರ್ತೆ: 26/ಮೇ /2024

ಕೋಟ ಹೋಬಳಿಯ ದಲಿತ ಸಂಘರ್ಷ ಸಮಿತಿಯಿಂದ ಅಕ್ಷರದಕ್ಕರೆ-2024 ಕಾರ್ಯಕ್ರಮ: ದಲಿತರು ಶಿಕ್ಷಣದಿಂದ ಉನ್ನತಿ ಕಾಣುತ್ತಿದ್ದಾರೆ- ಮಾವಳ್ಳಿ ಶಂಕರ್

ಕೋಟ: ದಲಿತರು ಗುಡಿಗೋಪುರ ಸುತ್ತುವುದನ್ನು ಬಿಟ್ಟು ಸಮುದಾಯಕ್ಕೊಸ್ಕರ ದುಡಿದ ತ್ಯಾಗಿಗಳ ಸಮಾಧಿ ಸುತ್ತಲಿ ಎಂದು ರಾಜ್ಯ ದಲಿತ  ಸಂಘರ್ಷ ಸಮಿತಿ ಬೆಂಗಳೂರು ಇದರ ಸಂಚಾಲಕ ಮಾವಳ್ಳಿ ಶಂಕರ್ ಸಮುದಾಯಕ್ಕೆ ಕರೆ ನೀಡಿದರು. ಅವರು ಭಾನುವಾರ ಕೋಟದ ಸಿ ಎ ಬ್ಯಾಂಕ್ ಬಿ.ಸಿ. ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋಟ ಹೋಬಳಿ ಹಮ್ಮಿಕೊಂಡ 25ನೇ ವರ್ಷದ ಉಚಿತ ನೋಟ್ ಬುಕ್ ,ಪ್ರತಿಭಾ ಪುರಸ್ಕಾರ ಅಕ್ಷರದಕ್ಕರೆ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಲಿತ ಸಮುದಾಯಕ್ಕೆ ಸಂವಿಧಾನ ಒಂದಿಲ್ಲದಿದ್ದರೆ ಇಷ್ಟರ ಹೊತ್ತಿಗೆ ನಾವೆಲ್ಲ ಅದೋಗತಿ ಎಣಿಸಬೇಕಿತ್ತು ಡಾ.ಬಿ.ಆರ್ ಅಂಬೇಡ್ಕರ್  ಸಂವಿಧಾನ ಕೆಳವರ್ಗದ ಜೀವನಕ್ಕೆ ಭದ್ರ ಬುನಾದಿ ನೀಡಿದೆ. ಶಿಕ್ಷಣದಿಂದ ಕ್ರಾಂತಿ ನಿರ್ಮಿಸಲು ಸಾಧ್ಯವಿದೆ ಎಂದು ಘಂಟಾಘೋಷವಾಗಿ ಕರೆ ನೀಡಿದ ಅವರು ಈ ಬಗ್ಗೆ ಸಮುದಾಯದ ಪೋಷಕರು ಜಾಗೃತರಾಗಿ ಶಿಕ್ಷಣ ನೀಡಲು ಕರೆನೀಡಿದರು.
ಆಗಿನ ಕಾಲದಲ್ಲೆ ಜಾತಿ ವ್ಯವಸ್ಥೆಯ ಕಟ್ಟುಪಾಡು ದಲಿತ ಸಮುದಾಯವನ್ನು ಅದೋಗತಿಗೆ ತಳ್ಳುವಂತೆ ಮಾಡಿತು ಮೇಲ್ವರ್ಗದ ಜನ ತಮ್ಮ ಸಮುದಾಯವನ್ನು ಹೀನರಾಗಿ ಕಾಣುತ್ತಿದ್ದರು ಆದರೆ ಇಂದು ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಸರಕಾರಿ ಶಾಲೆಗಳನ್ನೆ ಆಯ್ಕೆಮಾಡಿ ಆಂಗ್ಲ ಮಾಧ್ಯಮದ ವ್ಯಾಮೂಹ ಬಿಡಿ ಪ್ರಸ್ತುತ ಕನ್ನಡ ಮಾಧ್ಯಮ ಸರ್ವ ಶ್ರೇಷ್ಠತೆಯನ್ನು ಪಡೆಯುತ್ತಿದೆ. ಅತಿ ಹೆಚ್ಚು ಅಂಕ ಗಳಿಸುವ ಕೇಂದ್ರ ಸ್ಥಾನವಾಗಿ ಸರಕಾರಿ ಶಾಲೆಗಳು ಗುರುತಿಸಲ್ಪಟ್ಟಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಪಠ್ಯವಾಗಿ ಆಂಗ್ಲ ವ್ಯವಸ್ಥೆಯ ಬಗ್ಗೆ ಆಗಿನ ಮುಖ್ಯಮಂತ್ರಿಗಳ ಗಮನ ಸೆಳೆದು ಅದರ ಕಾರ್ಯಗತಕ್ಕೆ ಮೂಲವಾಗಿದ್ದೇವೆ. ಈ ಮೂಲಕ ಸರಕಾರಿ ಶಾಲೆಗಳ ಅವನತಿ ಕ್ಷೀಣಿಸಿವಂತೆ ಮಾಡಿದ್ದೇವೆ, ಕನ್ನಡ ಮಾಧ್ಯಮ ತೊಟ್ಟಿಲು ಅದರೆ ಆಂಗ್ಲ ಮಾಧ್ಯಮ ಮೆಟ್ಟಿಲಾಗಿ ತಮ್ಮ ಏಳ್ಗತಿಗೆ ತಕ್ಕಂತೆ ಬಳಸಿಕೊಳ್ಳಿ ಎಂದರು. ಇಡೀ ದೇಶದಲ್ಲಿ ಸಮಾನಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಆಗ ಮಾತ್ರ ಸಮಾನತೆ ಬರಲು ಸಾಧ್ಯವಿದೆ ಈ ದಿಸೆಯಲ್ಲಿ ಕೋಟ ಹೋಬಳಿ ಸಂಘಟನೆ ಒಂದು ಹೆಜ್ಜೆ ಮುಂದಿರಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಮಾವಳ್ಳಿ ಶಂಕರ್ ಆಶಾಭಾವನೆ ವ್ಯಕ್ತಪಡಿಸಿದರು.

ಮಣೂರು-ಪಡುಕರೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಅವರು ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಹಿಂದುಳಿದವರು ಸದೃಢರಾಗಲು ವಿದ್ಯೆ ಎಂಬ ಪ್ರಬಲ ಅಸ್ತ್ರದಿಂದ ಸಾಧ್ಯವಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕವಾಗಿ ತಮ್ಮ ಹಕ್ಕನ್ನು ಪಡೆಯಬೇಕು ಎಂದ ಅವರು ಬಾಲ್ಯದಿಂದಲೂ ದಲಿತರೊಂದಿಗಿದ್ದ ಒಡನಾಟವನ್ನು ಮೆಲುಕು ಹಾಕಿದರು.
ಇದೇ ವೇಳೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹಾಗೂ ರಾಜ್ಯ ಸಂಚಾಲಕ‌ ಮಾವಳ್ಳಿ ಶಂಕರ್ ರವರನ್ನು ಸನ್ಮಾನಿಸಲಾಯಿತು.
ವಿಶೇಷ ಪ್ರತಿಭಾ ಪುರಸ್ಕಾರದ ಭಾಗವಾಗಿ ಕೋಟ ಸಿ ಎ ಬ್ಯಾಂಕ್ ಆದ್ಯಕ್ಷ ಡಾ.ಕೆ ಕೃಷ್ಣ ಕಾಂಚನ್,ಯುವ ಭಾಗವತ ನವೀನ್ ಕೋಟ, ಶೈಕ್ಷಣಿಕ ಸಾಧಕಿ ಅಂಕಿತಾ ಇವರುಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಇದೇ ವೇಳೆ ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ಕರ್ನಾಟಕ ರಾಜ್ಯ ದಸಂಸ ಕೋಟ ಹೋಬಳಿ ಶಾಖೆ ಸಂಚಾಲಕ ನಾಗರಾಜ ಪಡುಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದಸಂಸ ಮಹಿಳಾ ಘಟಕದ ರಾಜ್ಯ ಸಂಘಟನಾ ಸಂಚಾಲಕಿ ಉಷಾರಾಣಿ, ಕ.ರಾ.ದಸಂಸ ಉಡುಪಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್, ರಾಜ್ಯ ಸಮಿತಿ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ,  ವಾಸುದೇವ ಮುದೂರು, ಎನ್.ಎ ನೇಜಾರು, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ, ಬೈಂದೂರು ತಾ. ಸಂಚಾಲಕ ನಾಗರಾಜ ಉಪ್ಪುಂದ, ಬ್ರಹ್ಮಾವರ ತಾ. ಸಂಚಾಲಕ ಶ್ರೀನಿವಾಸ ವಡ್ಡರ್ಸೆ ಮೊದಲಾದವರಿದ್ದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಟಿ. ಮಂಜುನಾಥ ಗಿಳಿಯಾರು ಪ್ರಸ್ತಾವನೆಗೈದು, ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು.  ಉಪನ್ಯಾಸಕರಾದ ಮಂಜುನಾಥ ಕೆ.ಎಸ್, ನಾಗರಾಜ ಗುಳ್ಳಾಡಿ, ಅಧ್ಯಾಪಕ ಸಂತೋಷ ಕುಮಾರ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು.