ಡೈಲಿ ವಾರ್ತೆ: 15/ಜೂ./2024
ಬಿದ್ಕಲ್ ಕಟ್ಟೆಯಲ್ಲಿ ನಾಗಲಕ್ಷ್ಮೀ ಹೈಟ್ಸ್ ವಸತಿ ಸಮುಚ್ಚಯದ ಭೂಮಿ ಪೂಜೆ :ರಾಜ್ಯದಲ್ಲಿ ವಸತಿಯ ಕೊರತೆ ದೊಡ್ಡ ಸಮಸ್ಯೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ
ಕರ್ನಾಟಕದಲ್ಲಿ ಎಲ್ಲ ಕುಟುಂಬಗಳಿಗೂ ವಸತಿಯ ಕೊರತೆ ಒಂದು ಜಟಿಲವಾದ ಸಮಸ್ಯೆಯಾಗಿದೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳೂ ಪ್ರತಿ ವರ್ಷವೂ ಲಕ್ಷ ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸುತ್ತವೆ. ಆ ಲೆಕ್ಕದಲ್ಲಿ ಇಲ್ಲಿರುವ ಕುಟುಂಬಗಳಿಗಿಂತ ಮನೆಗಳೇ ಜಾಸ್ತಿ ಇರಬೇಕಾಗಿತ್ತು. ಆದರೆ, ಸರ್ಕಾರದ ಮಾರ್ಗಸೂಚಿ ಯಂತೆ ಮನೆ ನಿರ್ಮಿಸುವುದು ಬಹು ಕಷ್ಟಕರ. ಅದು ಕೊಡುವ ಮೊತ್ತದಲ್ಲಿ ಮನೆಯಾಗದು. ಒಂದು ವೇಳೆ ಫಲಾನುಭವಿ ಸಾಲ ಮಾಡಿ ದೊಡ್ಡ ಮನೆ ಕಟ್ಟಿದರೆ, ಸರ್ಕಾರಿ ಸಹಾಯ ಸಿಗದು. ಆದ್ದರಿಂದ ಇತ್ತೀಚೆಗೆ ಜನರಿಗೆ ಫ್ಲ್ಯಾಟ್ ಗಳ ಕಡೆ ಆಸಕ್ತಿ ಹೆಚ್ಚಾಗುತ್ತಿದೆ – ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿದ್ಕಲ್ ಕಟ್ಟೆಯ ನಾಗಲಕ್ಷ್ಮೀ ಡೆವಲಪರ್ಸ್ ನವರು ನೂತನವಾಗಿ ನಿರ್ಮಿಸುತ್ತಿರುವ ನಾಗಲಕ್ಷ್ಮೀ ಹೈಟ್ಸ್ ವಸತಿ ಸಮುಚ್ಚಯದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ದಿನಗಳಲ್ಲಿ ಕುಟುಂಬಗಳು ಸಣ್ಣದಾಗಿದ್ದು, ಮಕ್ಕಳು ನಗರ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಹಳ್ಳಿಗಳ ಅವರ ಮನೆಯಲ್ಲಿ ಹಿರಿಯರು ಬಹುತೇಕ ಒಬ್ಬಂಟಿಯಾಗಿರುತ್ತಾರೆ. ಇಂತಲ್ಲಿ ಕೆಲವು ಕುಟುಂಬಗಳು ಒಟ್ಟಾಗಿ ನೆಲೆಸುವ ಅವಕಾಶವಿರುವ ಫ್ಲ್ಯಾಟ್ ಗಳ ಬಗ್ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶವಾದ ಬಿದ್ಕಲ್ ಕಟ್ಟೆಯಲ್ಲಿ ನಿರ್ಮಾಣವಾಗುವ ವಸತಿ ಸಮುಚ್ಚಯ ಯಶಸ್ವಿಯಾಗಲಿ ಎಂದೂ ಅವರು ಹಾರೈಸಿದರು. ಸಭೆಯನ್ನು ದೀಪ ಬೆಳಗಿ ಉದ್ಘಾಟಿಸಿದ ಉದ್ಯಮಿ ಶಂಕರ್ ಹೆಗ್ಡೆ, ಹಲವಾರು ಉದ್ಯೋಗದಾತ ಕಂಪೆನಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವ ಅವಕಾಶವನ್ನು ತಮ್ಮ ಉದ್ಯೋಗಿಗಳಿಗೆ ನೀಡಿರುವುದರಿಂದ ಮತ್ತು ನಗರಗಳಲ್ಲಿ ಟ್ರಾಫಿಕ್ ಇತ್ಯಾದಿ ಜಂಜಾಟಗಳಿಂದ ಬೇಸತ್ತವರು ಹಳ್ಳಿಗಳ ಕಡೆ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಫ್ಲ್ಯಾಟ್ ಗಳು ನಿರ್ಮಾಣವಾಗುತ್ತಿವೆ ಎಂದರು. ನೂತನ ನಾಗಲಕ್ಷ್ಮೀ ಹೈಟ್ಸ್ ಇಂತಹ ಬೇಡಿಕೆಗಳನ್ನು ಈಡೇರಿಸಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ಉದ್ಯಮಿ ಎಂ. ದಿನೇಶ್ ಹೆಗ್ಡೆ ಶುಭ ಹಾರೈಸಿ, ಇಂದಿನ ದಿನಗಳಲ್ಲಿ ಸೈಟ್ ಖರೀದಿಸಿ ಮನೆ ಕಟ್ಟುವುದು ಕಷ್ಟವಾಗಿದೆ. ಮಧ್ಯಮ ವರ್ಗದವರಿಗೂ ಸರ್ವ ಸೌಲಭ್ಯಗಳಿರುವ ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಹೊಂದುವುದು ಸುಲಭವಾಗಿದೆ. ಈ ಕಾರಣದಿಂದ ಅಪಾರ್ಟ್ ಮೆಂಟ್ ಉದ್ಯಮ ಹಳ್ಳಿಗಳಿಗೂ ವಿಸ್ತರಿಸುತ್ತಿದೆ. ಅಡಿಗರ ಈ ಉದ್ಯಮ ಯಶಸ್ವಿಯಾಗಲಿ ಎಂದರು. ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿಯ ಅಧಿಕಾರಿ ಸಖಾರಾಮ್ ಮಾತನಾಡಿ, ನೂತನ ಉದ್ಯಮಗಳಿಗೆ ಬ್ಯಾಂಕ್ ಸದಾ ಸಹಾಯ ಒದಗಿಸುವುದಾಗಿ ತಿಳಿಸಿದರು.
ವಿದ್ವಾನ್ ಮಾಧವ ಅಡಿಗ ಶುಭಾಶಂಸನೆ ಗೈದರು. ದಿ. ರಾಮ ಮೊಗವೀರರ ಅವಳಿ – ಜವಳಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾಗಲಕ್ಷ್ಮೀ ಡೆವಲಪರ್ಸ್ ಕೊಡಮಾಡಿದ ಸಹಾಯಧನವನ್ನು ಮಾಲೀಕ ರಾಘವೇಂದ್ರ ಅಡಿಗ ದಿವಂಗತರ ಪತ್ನಿಗೆ ಹಸ್ತಾಂತರಿಸಿದರು. ವಸತಿ ಸಮುಚ್ಚಯದಲ್ಲಿ ಮೊದಲು ಮನೆ ಖರೀದಿಸಿದ ಡಾ. ಕೃಷ್ಣ ರನ್ನು ಗೌರವಿಸಲಾಯಿತು. ನಾಗಲಕ್ಷ್ಮೀ ಡೆವಲಪರ್ಸ್ ನೊಂದಿಗೆ ಸಹಯೋಗ ಹೊಂದಿದ ಕೋಟೇಶ್ವರದ ಶ್ರೀ ಮಹಿ ಡೆವಲಪರ್ಸ್ ನ ಇಂಜಿನಿಯರ್ ಆಶ್ರಯ ಶೆಟ್ಟಿ ನಾಗಲಕ್ಷ್ಮೀ ಹೈಟ್ಸ್ ವಸತಿ ಸಮುಚ್ಚಯದ ಶ್ರೇಷ್ಠತೆಗಳು, ಅನುಕೂಲತೆಗಳನ್ನು ವಿವರಿಸಿದರು. ನಾಗಲಕ್ಷ್ಮೀ ಡೆವಲಪರ್ಸ್ ಮಾಲಿಕ ರಾಘವೇಂದ್ರ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಸ್ಥೆ ಬೆಳೆದು ಬಂದ ಬಗೆಯನ್ನು ವಿವರಿಸಿದರು. ತನ್ನ ಕಷ್ಟಾರ್ಜಿತದ ಹಣ ತನ್ನೂರಲ್ಲೇ ಸತ್ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂಬ ದೃಷ್ಟಿಯಲ್ಲಿ ಗ್ರಾಮೀಣ ಪ್ರದೇಶವಾದ ಬಿದ್ಕಲ್ ಕಟ್ಟೆಯಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ನಿರ್ಧರಿಸಿದೆ. ಇದರಿಂದ ಗ್ರಾಮೀಣ ಪ್ರದೇಶವಾದ ಇಲ್ಲಿ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಗಗನಚುಂಬಿ ಕಟ್ಟಡವನ್ನು ನಿರ್ಮಿಸಬೇಕು ಎಂಬುದು ತನ್ನ ಬಹುದಿನಗಳ ಕನಸು. ಪ್ರಸ್ತುತ ನಾಗಲಕ್ಷ್ಮೀ ಹೈಟ್ಸ್ ಸಮುಚ್ಚಯವು ನಾಲ್ಕು ಅಂತಸ್ತುಗಳನ್ನು ಹೊಂದಿ, ಹದಿನಾರು ವಿವಿಧ ಮಾದರಿಯ ಮನೆಗಳಿವೆ.ಕೋಟೇಶ್ವರದ ಖ್ಯಾತ ಇಂಜಿನಿಯರ್, ಉದ್ಯಮಿ ಆಶ್ರಯ ಶೆಟ್ಟಿಯವರ ಶ್ರೀ ಮಹಿ ಡೆವಲಪರ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ. ಪರಿಣತ ಇಂಜಿನಿಯರರು, ಕಟ್ಟಡ ವಾಸ್ತು ಪರಿಣತರು, ಕುಶಲ ಕರ್ಮಿಗಳ ತಂಡ ಕಾರ್ಯಭಾರ ವಹಿಸಿದೆ. ಇಲ್ಲಿನ ಗೃಹನಿವಾಸಿಗಳಲ್ಲಿ ಸೌಹಾರ್ದತೆ ಮತ್ತು ಸಂತಸ ಸದಾ ತುಂಬಿರುವಂತೆ ಮಾಡಲು ಪ್ರಾಚೀನ ಭಾರತೀಯ ವಾಸ್ತುಶಾಸ್ತ್ರದ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಅನುಕೂಲಕರ ಬಾಲ್ಕನಿಗಳೊಂದಿಗೆ ಒಂದು, ಎರಡು ಮತ್ತು ಮೂರು ಬೆಡ್ ರೂಮ್ ಗಳ ಮನೆಗಳು ಲಭ್ಯವಿವೆ. ವಿಶಾಲ ಮೆಟ್ಟಿಲುಗಳು, ಎಲಿವೇಟರ್ ಗಳು, ನಿರಂತರ ವಿದ್ಯುತ್ ಮತ್ತು ನೀರು ಪೂರೈಕೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅಪೇಕ್ಷಿತರಿಗೆ ಗುಣಮಟ್ಟದ ಆಹಾರ ಪೂರೈಕೆ ವ್ಯವಸ್ಥೆಯೂ ಇದೆ. ಅನುಕೂಲಕ ವಾಹನ ನಿಲುಗಡೆ ಅವಕಾಶ, ಸುಂದರ ಹಸಿರುಮಯ ಪ್ರಶಾಂತ ಪರಿಸರ ಹೊಂದಿದ್ದು, ಪ್ರಮುಖ ಸ್ಥಳಗಳು, ನಗರಗಳನ್ನು ತಲುಪಲು ಅನುಕೂಲಕರವಾಗಿದೆ. ಇದು ಇಲ್ಲಿನ ನಿವಾಸಿಗಳು ಮಾತ್ರವಲ್ಲದೆ ಈ ಮನೆಗಳಿಗೆ ಭೇಟಿ ನೀಡುವ ಆಪ್ತೇಷ್ಟರಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ಹೆಬ್ಬಂಡೆಯ ಮೇಲಿರುವ ಪ್ರಸಿದ್ಧ ಕೊಳನಕಲ್ಲು ಶ್ರೀ ಮಹಾಗಣಪತಿ ದೇವಾಲಯ ಅನತಿ ದೂರದಲ್ಲೇ ಇದೆ. ಸ್ವಾಭಾವಿಕವಾದ ಗಾಳಿ ಬೆಳಕು ಧಾರಾಳವಾಗಿ ಲಭ್ಯವಾಗಿ ಮನೆಗಳವರಿಗೆ ಪ್ರಕೃತಿಯೊಂದಿಗಿನ ಜೀವನಾನುಭವ, ಸಂತಸ ಹೆಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸೇವಾ ಕ್ಷೇತ್ರದಲ್ಲಿ ಹೆಸರಾದ ನಾಗಲಕ್ಷ್ಮೀ ಮತ್ತು ಶ್ರೀ ಮಹಿ ಸಂಸ್ಥೆಗಳ ಬೆಂಬಲ, ಸಹಕಾರ ಸದಾ ಇರುತ್ತದೆ. ಈಗಾಗಲೇ ಇಲ್ಲಿ ಐದು ಮನೆಗಳಿಗೆ ಬುಕಿಂಗ್ ಆಗಿದೆ. ಈ ಯೋಜನೆಯ ನಂತರ ಸಮೀಪದಲ್ಲೇ ಏಳು ಅಂತಸ್ತುಗಳ ಇನ್ನೊಂದು ವಸತಿ ಸಮುಚ್ಚಯವನ್ನು ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ವಿವರಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಹಿರಿಯ ಧಾರ್ಮಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಸಭಾಧ್ಯಕ್ಷತೆ ವಹಿಸಿದ್ದರು. ಆದೇಶ್ ಪಿ. ಬಿ. ಪ್ರಾರ್ಥಿಸಿದರು. ಪವಿತ್ರ ಅಡಿಗ ಸ್ವಾಗತಿಸಿದರು. ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಪರಮೇಶ್ವರ ಉಪಾಧ್ಯ, ನರಸಿಂಹ ಆಚಾರ್ಯ, ಶ್ರೀನಿಧಿ ಉಪಾಧ್ಯ, ರತ್ನಾಕರ ಶೆಟ್ಟಿ, ಸುಖೇಶ್ ಶೆಟ್ಟಿ, ಸತೀಶ್ ಅಡಿಗ, ಅತುಲ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಸತೀಶ್ ಅಡಿಗ ವಂದಿಸಿದರು. ಕುಲ ಪುರೋಹಿತ ವೇದಮೂರ್ತಿ ಚಂದ್ರಪ್ರಕಾಶ್ ಬಾಯಿರಿ ಭೂಮಿ ಪೂಜೆಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರೆ, ಗೋಪಾಲಕೃಷ್ಣ ಅಡಿಗ – ಲೀಲಾವತಿ ದಂಪತಿ ಅಧ್ವರ್ಯುಗಳಾಗಿದ್ದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭಹಾರೈಸಿದರು. ಹಾರ್ದಳ್ಳಿ – ಮಂಡಳ್ಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ವಿದ್ಯಾಧರ ಭಟ್, ಪುಷ್ಪಾ, ಸುಬ್ರಹ್ಮಣ್ಯ ಅಡಿಗ ಮೊದಲಾದವರು ಉಪಸ್ಥಿತರಿದ್ದರು.