ಡೈಲಿ ವಾರ್ತೆ: 16/ಜೂ./2024

ಸಾರಿಗೆ ಬಸ್ ಚಾಲಕನಿಂದ ಹಿಟ್ & ರನ್- ಸುಳಿವುಕೊಟ್ಟ ಪ್ಲಾಸ್ಟಿಕ್ ಚೂರು

ಮಡಿಕೇರಿ: ಪಾದಚಾರಿಯೊಬ್ಬರ ಸಾವಿಗೆ ಕಾರಣವಾಗಿದ್ದ ಹಿಟ್ & ರನ್ ಪ್ರಕರಣದಲ್ಲಿ ಪ್ಲಾಸ್ಟಿಕ್ ಚೂರೊಂದು ಮಹತ್ವದ ಸುಳಿವು ನೀಡಿದ್ದು, ಅಪಘಾತವೆಸಗಿ ಪರಾರಿಯಾಗಿದ್ದ ಚಾಲಕನ ಬಂಧನಕ್ಕೆ ಸಹಕಾರಿಯಾಗಿದೆ.

ಬಂಧಿತ ಆರೋಪಿಯನ್ನು ಕೆಎಸ್‍ಆರ್‌ಟಿಸಿ ಬಸ್ ಚಾಲಕನಾದ ಕೆಆರ್ ನಗರದ ಕೃಷ್ಣಗೌಡ ಎಂದು ಗುರುತಿಸಲಾಗಿದೆ. ಘಟನೆ ನಡೆದ 24 ಗಂಟೆಯಲ್ಲಿ ಚಾಲಕನನ್ನು ಗೋಣಿಕೊಪ್ಪದ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪದ ಪಲ್ಲೇರಿಯಲ್ಲಿ ಕೂಲಿ ಕಾರ್ಮಿಕ ಯರವರ ನೋಂಜ (45) ಎಂಬಾತ ಅಪಘಾತದಲ್ಲಿ ಮೃತಪಟ್ಟಿದ್ದ. ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪರಿಶೀಲನೆಗೆ ತೆರಳಿದ್ದಾಗ, ಮೃತ ದೇಹದ ಬಳಿ ಕೆಂಪು ಬಣ್ಣದ ಪ್ಲಾಸ್ಟಿಕ್ ಚೂರೊಂದು ಬಿದ್ದಿರುವುದು ಪತ್ತೆಯಾಗಿತ್ತು. ಬಳಿಕ ಅದು ಕೆಎಸ್‍ಆರ್‌ಟಿಸಿ ಬಸ್‍ನ ಇಂಡಿಕೇಟರ್‌ನ ಚೂರು ಎಂದು ತಿಳಿದು ಬಂದಿತ್ತು. ಇದೇ ಸುಳಿವನ್ನು ಇಟ್ಟುಕೊಂಡು ಪೊಲೀಸರು ಮೈಸೂರಿನಲ್ಲಿ ಬಸ್ ಚಾಲಕನನ್ನು ಬಂಧಿಸಿದ್ದಾರೆ. ಬಸ್ಸನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.