ಡೈಲಿ ವಾರ್ತೆ: 20/ಜೂ./2024
ಬೀಜಾಡಿ: ಸ್ನೇಹಿತನೊಂದಿಗೆ ನೀರಿಗಿಳಿದು ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋದ ಯುವಕ, ಓರ್ವನ ರಕ್ಷಣೆ!
ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಬೀಚ್‌ಗೆ ಸ್ನೇಹಿತನ ಜತೆ ವಿಹಾರಕ್ಕೆಂದು ಬಂದಿದ್ದ ಯುವಕನೊಬ್ಬ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಸಮುದ್ರಪಾಲಾದ ಘಟನೆ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ. ಆತನ ಜತೆಗೆ ಬಂದು, ರಕ್ಷಣೆಗೆಂದು ಸಮುದ್ರಕ್ಕಿಳಿದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಸಮುದ್ರ ಅಲೆಗೆ ನಾಪತ್ತೆಯಾದ ಯುವಕ ತುಮಕೂರು ಜಿಲ್ಲೆಯ ತಿಪಟೂರಿನ ರಾಜೇಶ್ ಅವರ ಪುತ್ರ ಯೋಗೀಶ್ (23) ಎಂದು ಗುರುತಿಸಲಾಗಿದೆ. ಈತನೊಂದಿಗೆ ಬಂದಿದ್ದ ಅದೇ ಜಿಲ್ಲೆಯ ಸಂದೀಪ್ (24) ನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮದುವೆಗೆ ಬಂದಿದ್ದ ಯುವಕರು: ಯೋಗೀಶ್ ಹಾಗೂ ಸಂದೀಪ್ ಇಬ್ಬರೂ ಜೂ. 20ರಂದು ನಡೆಯಲಿರುವ ತನ್ನ ಸ್ನೇಹಿತ ಬೀಜಾಡಿಯ ವಿನಯ್ ಅವರ ಅಕ್ಕನ ಮದುವೆಗೆಂದು ಜೂ. 19 ರ ಬೆಳಿಗ್ಗೆ ಬೀಜಾಡಿಗೆ ಬಂದಿದ್ದರು. ಸಂಜೆ ವೇಳೆ ಬೀಜಾಡಿ ಬೀಚ್‌ಗೆ ಯೋಗೀಶ್ ಹಾಗೂ ಸಂದೀಪ್ ವಿಹಾರಕ್ಕೆಂದು ಹೋಗಿದ್ದು. ಈ ವೇಳೆ ಯೋಗೀಶ್ ನೀರಿಗಿಳಿದಿದ್ದಾರೆ. ಸಂಜೆ ವೇಳೆಗೆ ಮಳೆ ಜಾಸ್ತಿ ಇದ್ದುದಲ್ಲದೆ, ಕಡಲ ಅಲೆಗಳ ಅಬ್ಬರ, ಗಾಳಿಯ ವೇಗವೂ ತುಸು ಜೋರಾಗಿಯೇ ಇತ್ತು. ಅಲೆಯಬ್ಬರಕ್ಕೆ ಯೋಗೀಶ್ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಜತೆಗಿದ್ದ ಸಂದೀಪ್ ಅವರು ಯೋಗೀಶ್ ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್‌ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್, ನಗರ ಠಾಣಾ ಎಸ್‌ಐ ಪ್ರಸಾದ್ ಕುಮಾರ್ ಹಾಗೂ ಪೊಲೀಸ್ ಸಿಬಂದಿ ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿ ಭೇಟಿ ನೀಡಿ, ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.