ಡೈಲಿ ವಾರ್ತೆ: 13/ಜುಲೈ /2024

ಪಡುಬಿದ್ರಿ: ತನ್ನ ಮಗಳ ಖಾಸಗಿ ವಿಡಿಯೋವನ್ನೇ ಹರಿಯಬಿಟ್ಟ ತಂದೆ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ, ಮೂಲ್ಕಿಯಲ್ಲಿರುವ ಮೈಮುನಾ ಫೌಂಡೇಶನ್ ಆಶ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸ್ ದಾಳಿ – ವೃದ್ಧರು ಹಾಗೂ ವಿಕಲಚೇತನರ ರಕ್ಷಣೆ

ಪಡುಬಿದ್ರಿ : ತಂದೆಯೇ ಮಗಳ ಖಾಸಗಿ ವೀಡಿಯೊ ತುಣುಕುಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು, ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಡುಬಿದ್ರಿಯಲ್ಲಿ ಸಂಭವಿಸಿದೆ.

ಆಪದ್ಭಾಂಧವ ಆಸಿಫ್ ಎಂದೇ ಗುರುತಿಸಿಕೊಂಡಿರುವ ಪಡುಬಿದ್ರಿ ಸಮೀಪದ ಕಂಚಿನಡ್ಕ ನಿವಾಸಿ ಆಸಿಫ್ ಆರೋಪಿಯಾಗಿದ್ದಾನೆ. ಮಗಳ ವೀಡಿಯೊಗಳನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿರುವುದಕ್ಕೆ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಆಸಿಫ್ ಪುತ್ರಿ ತೀರ್ಥಹಳ್ಳಿಯ ಸಂಬಂಧಿಕನೇ ಆದ ತೌಸಿಫ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಇದು ಆಸಿಫ್‌ಗೆ ಇಷ್ಟವಿರಲಿಲ್ಲ. ತೌಸೀಫ್‌ನನ್ನು ಮನೆಗೆ ಕರೆಸಿ ಹಲ್ಲೆ ಮಾಡಿದ್ದಲ್ಲದೆ ಇಬ್ಬರ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವೀಡಿಯೊ ಮತ್ತು ಫೋಟೊಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಅವುಗಳನ್ನು ವಾಟ್ಸಪ್ ಗ್ರೂಪ್‌ಗಳು ಸೇರಿ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನು ವಿರೋಧಿಸಿದ ಪತ್ನಿ ಮತ್ತು ಪುತ್ರಿಯ ಮೇಲೂ ಆಸಿಫ್ ಹಲ್ಲೆ ಮಾಡಿದ್ದಾನೆ.
ಪತ್ನಿ ಹಿಂಸೆ ತಡೆಯಲಾಗದೆ ಉಚ್ಚಿಲದಲ್ಲಿರುವ ತವರು ಮನೆಗೆ ಹೋದಾಗ ಅಲ್ಲಿಗೆ ಹೋಗಿ ಕೂಡ ಹಲ್ಲೆ ಮಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಮತ್ತು ವೀಡಿಯೊ ವೈರಲ್ ಆದ ಬಳಿಕ ಮನನೊಂದ ಪುತ್ರಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಪದ್ಭಾಂಧವ ಆಸೀಫ್ ನಡೆಸುತ್ತಿದ್ದ ಆಶ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಆಶ್ರಮದಲ್ಲಿದ್ದ ವೃದ್ಧರು ಹಾಗೂ ವಿಕಲಚೇತನರ ರಕ್ಷಣೆ:
ಮುಲ್ಕಿ ಸಮೀಪದ ಹಳೆಯಂಗಡಿ ಇಂದ್ರನಗರ ಕಾಲೇಜ್ ಬಳಿಯ ಖಾಸಗಿ ಮನೆಯೊಂದರಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮೈಮುನಾ ಫೌಂಡೇಶನ್ ಎಂಬ ಅನಾಥಾಶ್ರಮವನ್ನು ಆಪದ್ಭಾಂಧವ ಆಸೀಫ್ ನಡೆಸುತ್ತಿದ್ದು. ಇದರಲ್ಲಿ ಮಾನಸಿಕವಾಗಿ ನೊಂದಿರುವ ವೃದ್ಧರು ಹಾಗೂ ವಿಕಲಚೇತನರನ್ನು ಆರೈಕೆ ಮಾಡುತ್ತಿದ್ದರು.

ಕಳೆದ ಕೆಲ ದಿನಗಳಿಂದ ಅವರನ್ನು ಆರೈಕೆ ಮಾಡದೆ ಇರುವ ಬಗ್ಗೆ ಸ್ಥಳೀಯರು ಗಮನಿಸಿ ಹಳೆಯಂಗಡಿ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ. ಈ ಸಂದರ್ಭ ಕೂಡಲೇ ಕಾರ್ಯಪ್ರವೃತ್ತರಾದ ಪಂಚಾಯತ್ ಅಧ್ಯಕ್ಷೆ ಹಾಗೂ ಸದಸ್ಯರು ನೀಡಿ ಪರಿಶೀಲಿಸಿ ಶಾಸಕ ಉಮಾನಾಥ ಕೋಟ್ಯಾನ್, ಮುಲ್ಕಿ ತಹಶೀಲ್ದಾ‌ರ್, ಮುಲ್ಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಾಗ ಆಶ್ರಮದ ಮುಖ್ಯಸ್ಥ ಆಪದ್ಬಾಂಧವ ಎಂಬುವರು ಸ್ಥಳದಲ್ಲಿ ಇರಲಿಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿದ್ದು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಆಶ್ರಮದಲ್ಲಿದ್ದ ಮಾನಸಿಕವಾಗಿ ನೊಂದಿರುವ ವೃದ್ಧರೊಬ್ಬರು ಮಾತನಾಡಿ ಕೊರೊನಾ ದಿನಗಳಲ್ಲಿ ದಾರಿಯಲ್ಲಿ ಹೋಗುತ್ತಿದ್ದ ನನ್ನನ್ನು ಬಲಾತ್ಕಾರವಾಗಿ ಎಳೆದು ತಂದು ಕೂಡಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಪಂಚಾಯತ್‌ ಅಧ್ಯಕ್ಷೆ ಪೂರ್ಣಿಮಾ ಮಾತನಾಡಿ ಆಶ್ರಮದ ಒಳಗಡೆ ಶೌಚಾಲಯ ಸ್ವಚ್ಛತೆ ಇಲ್ಲದೆ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಹಾಗೂ ಕಳೆದ ಮೂರು ದಿನಗಳಿಂದ ಊಟ ಮಾಡದೆ ಅಸ್ವಸ್ಥರಾಗಿರುವ ವೃದ್ಧರು ಹಾಗೂ ವಿಕಲಚೇತನರನ್ನು ರಕ್ಷಿಸುವ ಕಾರ್ಯಾಚರಣೆ ನಡೆದಿದೆ ಎಂದರು.