ಡೈಲಿ ವಾರ್ತೆ: 29//ಆಗಸ್ಟ್/ 2025

ದಾವಣಗೆರೆ: ಗಣೇಶಮೂರ್ತಿ ಬಳಿಯ ವಿವಾದಾತ್ಮಕ ಫ್ಲೆಕ್ಸ್‌ ತೆರವುಗೊಳಿಸಿದ ಪೊಲೀಸರು

ದಾವಣಗೆರೆ: ಮಟ್ಟಿಕಲ್‌ನ ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಅಳವಡಿಸಿದ್ದ ವಿವಾದಾತ್ಮಕ ಫ್ಲೆಕ್ಸ್‌ನ್ನು ಪೊಲೀಸರು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ರಾತ್ರಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ಶುಕ್ರವಾರ ಬೆಳಿಗ್ಗೆ ತಿಳಿಗೊಂಡಿದೆ.
ಶಿವಾಜಿ ಹಾಗೂ ಅಫ್ಜಲ್ ಖಾನ್‌ ನಡುವಿನ ಯುದ್ಧದ ಸನ್ನಿವೇಶದ ಆಕ್ಷೇಪಾರ್ಹ ಫ್ಲೆಕ್ಸ್‌ ತೆರವುಗೊಂಡಿದ್ದು, ಈ ಸ್ಥಳದಲ್ಲಿ ಶಿವಾಜಿಯ ಚಿತ್ರವನ್ನು ಅಳವಡಿಸಲಾಗಿದೆ.

ನಗರದ ಸಾವರ್ಕರ್ ಯುವಕರ ಸಂಘ ಮಟ್ಟಿಕಲ್‌ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯ ಪೆಂಡಾಲ್ ಬಳಿ ಬೃಹತ್ ಗಾತ್ರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಶಿವಾಜಿ ಹಾಗೂ ಅಫ್ಜಲ್ ಖಾನ್‌ ನಡುವಿನ ಯುದ್ಧದ ಸನ್ನಿವೇಶದ ಫ್ಲೆಕ್ಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಜನರು ಕೋಮುಭಾವನೆ ಕೆರಳಿಸುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ರಾತ್ರಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಕ್ಷೇಪಾರ್ಹ‌ ಚಿತ್ರ ತೆರವುಗೊಳಿಸುವಂತೆ ಗಣೇಶ ಉತ್ಸವ ಸಮಿತಿಗೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಘಪರಿವಾರದ ಕಾರ್ಯಕರ್ತರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಇದರಿಂದ ಗುರುವಾರ ಮಧ್ಯರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.