ಡೈಲಿ ವಾರ್ತೆ: 29//ಆಗಸ್ಟ್/ 2025

ಬೆಂಗಳೂರಿನಲ್ಲಿರೋ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಸಂದೇಶ

ಬೆಂಗಳೂರು: ಬೆಂಗಳೂರಿನ ಹಲಸೂರು ಕೆರೆ ಸಮೀಪ ಇರುವ ಗುರುಸಿಂಗ್ ಸಭಾ ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ನಾಲ್ಕು ದಿನಗಳ ಹಿಂದೆ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಬಂದಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕು ಆರ್​​ಡಿಎಕ್ಸ್ ಸ್ಫೋಟಿಸುವುದಾಗಿ ರಾಜ ಗಿರಿ ಎಂಬಾತನ ಹೆಸರಿನಲ್ಲಿ ಕಳುಹಿಸಲಾದ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಸಿಖ್ ಗುರುದ್ವಾರದ ಶೌಚಾಲಯದಲ್ಲಿ ಬಾಂಬ್ ಇಟ್ಟಿದ್ದಾಗಿ ಸಂದೇಶದಲ್ಲಿ ತಿಳಿಸಲಾಗಿತ್ತು. ಋಷಿಪಾಲ್ ಸಿಂಗ್ ಎಂಬವರು ನೀಡಿದ ದೂರು ಆಧರಿಸಿ ಕೇಸ್ ದಾಖಲಿಸಿದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಹೆಚ್ಚಾಗುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ. ಆರು ದಿನಗಳ ಹಿಂದಷ್ಟೇ, ಬೆಂಗಳೂರು ನಗರದ ಸಿವಿಲ್ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ತಕ್ಷಣವೇ ಹಲಸೂರು ಗೇಟ್ ಪೊಲೀಸರು ಮತ್ತು ಶ್ವಾನದಳ ಕೋರ್ಟ್ ಆವರಣವನ್ನು ಪರಿಶೀಲಿಸಿ, ಅದೊಂದು ಹುಸಿ ಬಾಂಬ್ ಬೆದರಿಕೆ ಎಂಬುದನ್ನು ಪತ್ತೆ ಹಚ್ಚಿತ್ತು.

ಜುಲೈ 27ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿ ಮತ್ತು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.