ಡೈಲಿ ವಾರ್ತೆ: 14/ಜುಲೈ /2024

ಅಮೆರಿಕ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ರ್‍ಯಾಲಿ ಮೇಲೆ ಗುಂಡಿನ ದಾಳಿ – ಬಲ ಕಿವಿಗೆ ಗಾಯ!

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ರ್‍ಯಾಲಿ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಟ್ರಂಪ್ ಬಲ ಕಿವಿಗೆ ಗಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶೂಟರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯ ಬಳಿಕ ಟ್ರಂಪ್ ಮುಖ ರಕ್ತಸಿಕ್ತವಾಗಿತ್ತು.

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಟ್ರಂಪ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಗುಂಡಿನ ಸದ್ದು ಕೇಳಿಸಿತು. ಸ್ಫೋಟದ ಸದ್ದಿಗೆ ಟ್ರಂಪ್ ವೇದಿಕೆಯ ಮೇಲೆ ಬಿದ್ದಿದ್ದಾರೆ. ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ತಕ್ಷಣವೇ ವೇದಿಕೆಯಿಂದ ಕೆಳಗಿಳಿಸಿದರು. ಈ ವೇಳೆ ಟ್ರಂಪ್ ಮುಖ ಹಾಗೂ ಕಿವಿಯಲ್ಲಿ ರಕ್ತ ಕಾಣಿಸಿಕೊಂಡಿತ್ತು.

ಟ್ರಂಪ್ ರ್‍ಯಾಲಿಯಲ್ಲಿ ಗುಂಡು ಹಾರಿಸಿದ ಆರೋಪಿಯನ್ನು ಕೊಲ್ಲಲಾಗಿದೆ ಎಂದು ಬಟ್ಲರ್ ಕೌಂಟಿ ಜಿಲ್ಲಾ ಅಟಾರ್ನಿ ರಿಚರ್ಡ್ ಗೋಲ್ಡಿಂಗರ್ ಹೇಳಿದ್ದಾರೆ. ಇದರೊಂದಿಗೆ ರ್‍ಯಾಲಿಯಲ್ಲಿದ್ದ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿನ ಅಪಘಾತದ ನಂತರ ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ ಮತ್ತು ಅವರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯು ಟ್ರಂಪ್‌ರನ್ನು ಹತ್ಯೆ ಮಾಡುವ ಪ್ರಯತ್ನವಾಗಿರಬಹುದು ಎಂದು ಅಂದಾಜಿಸಲಾಗಿದೆ. 1981 ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಮೆರಿಕ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಇದು ಮೊದಲ ಹತ್ಯೆಯ ಪ್ರಯತ್ನವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಗುಂಡಿನ ದಾಳಿಯ ನಂತರ ಕಾನೂನು ಜಾರಿಯ ತ್ವರಿತ ಕ್ರಮಕ್ಕಾಗಿ ಧನ್ಯವಾದ ಹೇಳಿದ್ದಾರೆ.