ಡೈಲಿ ವಾರ್ತೆ: 17/ಜುಲೈ /2024

ಮೆಸ್ಕಾಂ ಲೈನ್ ಮ್ಯಾನ್ ಗಳ ಕರ್ತವ್ಯ ನಿಷ್ಟೆ – ಹಿಡಿಶಾಪ ಹಾಕುವ ಮುನ್ನ ಯೋಚಿಸಿ ಗ್ರಾಹಕರೇ

ಕೋಟ: ಉಡುಪಿ ಜಿಲ್ಲೆಯ ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗಾಳಿಯೂ ರಭಸವಾಗಿ ಬೀಸಿ ವಿದ್ಯುತ್ ಕಣ್ಣು ಮುಚ್ಚಾಲೆ ಆಡುತ್ತಿದೆ. ಇದರೊಂದಿಗೆ ಮೆಸ್ಕಾಂ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯ.

ಆದರೆ ಆ ಮಳೆ ಗಾಳಿಯ ನಡುವೆ ಲೈನ್ ಮ್ಯಾನ್ ಗಳು ವಿದ್ಯುತ್ ನೀಡಲು ಪ್ರಯತ್ನ ಪಡುವ ಬಗ್ಗೆ ಯಾರೂ ಮಾತನಾಡುವುದಿಲ್ಲ.

ಹೌದು ಮೆಸ್ಕಾಂನ ಸಿಬ್ಬಂದಿ ಇಲಾಖೆಯಲ್ಲಿ ಲೈನ್ ಮ್ಯಾನ್ ಗಳ ಕೊರತೆಯ ನಡುವೆಯೂ , ಇರುವ‌ ಕೆಲವೇ ಕೆಲವು ಲೈನ್ ಮ್ಯಾನ್ ಗಳ ಸಹಾಯದಿಂದ ಹಗಲಿರುಳೆನ್ನದೇ ಮಳೆಯನ್ನು ಲೆಕ್ಕಿಸದೇ ಗ್ರಾಹಕನಿಗೆ ವಿದ್ಯುತ್ ನೀಡುತ್ತಿರುವುದು ಶ್ಲಾಘನೀಯ.
ಬ್ರಹ್ಮಾವರ ಮೆಸ್ಕಾಂ ವಿಭಾಗದ ಕೋಟ, ಸಾಸ್ತಾನ ಪೇತ್ರಿ, ಮಂದಾರ್ತಿ ಬಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ 50 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳಲ್ಲಿ ತೊಂದರೆ, ಇನ್ನೊಂದೆಡೆ ಗಾಳಿಗೆ ವಿದ್ಯುತ್ ಕಂಬಗಳು ಧರಾಶಾಯಿ, ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಗ್ರಾಹಕರಿಗೆ ಸಮಸ್ಯೆ ಆಗಿತ್ತು. ಇದನ್ನೆಲ್ಲ ಮಳೆ, ನೆರೆಯ ನಡುವೆ ತಮ್ನ ಕರ್ತವ್ಯ ನಿರ್ವಹಿಸಿ ಗ್ರಾಹಕನಿಗೆ ವಿದ್ಯುತ್ ನೀಡುತ್ತಿರುವ ಮೆಸ್ಕಾಂ ಲೈನ್ ಮ್ಯಾನ್ ಗಳ ಕಾರ್ಯವನ್ನು ಎಲ್ಲರೂ ಮೆಚ್ಚಲೇಬೇಕು ಹಾಗೂ ಅವರನ್ನು ಪ್ರೋತ್ಸಾಹಸಬೇಕಾದ ಧರ್ಮ ನಮ್ಮದಾಗಬೇಕು.