ಡೈಲಿ ವಾರ್ತೆ: 18/ಜುಲೈ /2024

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಶೃಂಗೇರಿ-ಹೊರನಾಡು ಸೇರಿದಂತೆ ಪ್ರವಾಸ ತಾಣಗಳ ರಸ್ತೆ ಸಂಚಾರ ಬಂದ್

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರಗಳನ್ನೇ ಸೃಷ್ಟಿಸಿ ಜೀವ ಭಯವನ್ನ ಮೂಡಿಸಿದೆ. ನೋಡ ನೋಡುತ್ತಿದ್ದಂತೆ ಮನೆಗಳು ಕುಸಿದು ಬೀಳುತ್ತಿವೆ. ತುಂಗ, ಹೇಮಾವತಿ ಆರ್ಭಟಕ್ಕೆ ಜನ ಕಂಗಾಲಾಗಿದ್ದಾರೆ. ಸದ್ಯ ಮುಂದುವರೆದ ಭಾರೀ ಮಳೆ‌ ಹಿನ್ನೆಲೆ ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್​ ಆಗಿದೆ. ಸಂಪೂರ್ಣ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ವಾಹನ ಸವಾರರಿಗೆ ಹಳುವಳ್ಳು ಮಾರ್ಗವಾಗಿ ಸಂಚಾರ ಮಾಡಲು‌ ಸೂಚನೆ ನೀಡಲಾಗಿದೆ.

ಶೃಂಗೇರಿಯಿಂದ ಹೊರನಾಡು ಮುಖ್ಯ ರಸ್ತೆ ಬಂದ್
ಕಳಸ ಪಟ್ಟಣಕ್ಕೆ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಬಂದ್ ಆಗಿದೆ. ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್ ಆಗಿದೆ. ಮಧ್ಯಾಹ್ನ ಬಳಿಕ‌ ಕಳಸ‌, ಕುದುರೆಮುಖ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ
ಮಲೆನಾಡು ಭಾಗದ 6 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ನಗರ, ಅಂಬಳೆ ಹೋಬಳಿ, ಲಕ್ಯಾ ಹೋಬಳಿ ‌ಹೊರತು ಪಡಿಸಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ,ಶೃಂಗೇರಿ, ಕೊಪ್ಪ, ಎನ್​ಆರ್​ ಪುರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮುಂಜಾಗ್ರತವಾಗಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.