ಡೈಲಿ ವಾರ್ತೆ: 19/ಜುಲೈ /2024

ರೈಲ್ವೆ ಹಳಿಯಲ್ಲಿ ಎಣ್ಣೆ ಪಾರ್ಟಿ: ರೈಲು ಡಿಕ್ಕಿ ಹೊಡೆದು ಮೂವರು ಯುವಕರು ಸ್ಥಳದಲ್ಲೇ ಸಾವು!

ಗಂಗಾವತಿ: ರೈಲ್ವೆ ಹಳಿಯ ಮೇಲೆ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದ ಮೂವರು ಯುವಕರ ಮೇಲೆ ರೈಲು ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಗಂಗಾವತಿಯ ಕನಕಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಗಂಗಾವತಿಯ ಮೌನೇಶ (23), ಸುನೀಲ್ ಕುಮಾರ(23), ವೆಂಕಟ್ (20)
ಎಂದು ಗುರುತಿಸಲಾಗಿದೆ.

ಈ ಮೂವರು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕನಕಗಿರಿ ರಸ್ತೆಯಲ್ಲಿರುವ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಡೆಯಿಂದ ಆಗಮಿಸಿದ ರೈಲು ಮೂವರ ಮೇಲೆಯೇ ಹರಿದಿದ್ದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಮದ್ಯದ ಬಾಟಲಿ, ಮೊಬೈಲ್ ಹಾಗೂ ಕೆಲವು ತಿಂಡಿ ಪಾಕೇಟ್ ಗಳಿದ್ದು ಸ್ಥಳಕ್ಕೆ ರೈಲ್ವೇ ಇಲಾಖೆಯ ಪಿಎಸ್ಐ ಬಿ.ಎನ್.ರಾಮಣ್ಣ ನೇತೃತ್ವದ ರೈಲ್ವೇ ಪೊಲೀಸ್ ತಂಡ ಭೇಟಿ ನೀಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.