ಡೈಲಿ ವಾರ್ತೆ: 19/ಜುಲೈ /2024

ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಟ್ಯಾಂಕರ್ ನಿಂದ 30 ಟನ್ ಗ್ಯಾಸ್ ಖಾಲಿಗೆ ಕಾರ್ಯಾಚರಣೆ ಆರಂಭ

ಉತ್ತರ ಕನ್ನಡ: ಶಿರೂರುನಲ್ಲಿ ಏಕಾಏಕಿ ಗುಡ್ಡ ಕುಸಿದ ಪರಿಣಾಮ ಗಂಗಾವಳಿ ನದಿಗೆ ಬಿದ್ದು ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್‌ ಮೇಲೆತ್ತುವ ಕಾರ್ಯಾಚರಣೆ ಗುರುವಾರ ಆರಂಭಗೊಂಡಿದೆ.

ಎರಡು ದಿನಗಳಿಂದ ಶಿರೂರಿಗೆ 7 ಕಿ.ಮೀ. ದೂರದ ಸಗಡಗೇರಿ ಗ್ರಾಮದ ಬಳಿ ನದಿಯಲ್ಲಿ ತೇಲುತ್ತಾ ಲಂಗರು ಹಾಕಿದ್ದ ಟ್ಯಾಂಕರನ್ನು ನದಿಯಲ್ಲೇ ಅನಿಲ ಖಾಲಿ ಮಾಡಿ ಹೊರಗೆಳೆದು ತರಲಾಗುತ್ತಿದೆ.

ಮಂಗಳೂರಿನ ಎಂಆರ್‌ಪಿಎಲ್‌, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ನೌಕಾದಳ ಹಾಗೂ ಇತರ ಪರಿಣತರ ತಂಡ ಗುರುವಾರ ಬೆಳಗ್ಗೆಯೇ ಬೋಟ್‌ ಮೂಲಕ ತೆರಳಿ ಟ್ಯಾಂಕರ್‌ಗೆ ಹಗ್ಗದಿಂದ ಕಟ್ಟಿ ನಾಲ್ಕು ಕ್ರೇನ್‌ಗಳನ್ನು ಬಳಸಿ ಅರ್ಧತಾಸಿನಲ್ಲೇ ದಡದಂಚಿಗೆ ಎಳೆದು ತಂದಿತು.
ಅಪರಾಹ್ನ 2 ಗಂಟೆ ಹೊತ್ತಿಗೆ ಟ್ಯಾಂಕರ್‌ನಿಂದ ಅನಿಲವನ್ನು ನದಿ ನೀರಿಗೆ ಬಿಡುವ ಕಾರ್ಯ ಆರಂಭಗೊಂಡಿತು. ಶುಕ್ರವಾರ ಸಂಜೆ ಹೊತ್ತಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.